ಬರ್ತ್‌ಡೇ ಬೇಬ್ ಏಂಜಲಿಕ್ ಕೆರ್ಬರ್ ಹಾಗೂ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಮುನ್ನಡೆದಿದ್ದರೆ, ಪುರುಷರ ವಿಭಾಗದಲ್ಲಿ ಅಗ್ರ ಕ್ರಮಾಂಕಿತ ಆಟಗಾರ ಆ್ಯಂಡಿ ಮರ‌್ರೆ ಮತ್ತು ರೋಜರ್ ಫೆಡರರ್ ಕೂಡ ಮೂರನೇ ಸುತ್ತಿಗೆ ನಡೆದರು.
ಮೆಲ್ಬೋರ್ನ್ (ಜ.18): ಬರ್ತ್ಡೇ ಬೇಬ್ ಏಂಜಲಿಕ್ ಕೆರ್ಬರ್ ಹಾಗೂ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಮುನ್ನಡೆದಿದ್ದರೆ, ಪುರುಷರ ವಿಭಾಗದಲ್ಲಿ ಅಗ್ರ ಕ್ರಮಾಂಕಿತ ಆಟಗಾರ ಆ್ಯಂಡಿ ಮರ್ರೆ ಮತ್ತು ರೋಜರ್ ಫೆಡರರ್ ಕೂಡ ಮೂರನೇ ಸುತ್ತಿಗೆ ನಡೆದರು.
ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ಬುಧವಾರ ನಡೆದ ಮಹಿಳೆಯರ ವಿಭಾಗದಲ್ಲಿ ವಿಶ್ವದ ನಂ.1 ಆಟಗಾರ್ತಿ ಜರ್ಮನಿಯ ಏಂಜಲಿಕ್ ಕೆರ್ಬರ್ ತಮ್ಮ ದೇಶದವರೇ ಆದ ಕರಿನಾ ವಿಟ್ಟೋ ವಿರುದ್ಧ 6-2, 6-7 (3/7) ಹಾಗೂ 6-2 ಸೆಟ್ಗಳಲ್ಲಿ ಗೆಲುವು ಪಡೆದರು. ಬುಧವಾರ 29ನೇ ವಸಂತಕ್ಕೆ ಕಾಲಿರಿಸಿದ ಕೆರ್ಬರ್, ಮೊದಲ ಸುತ್ತಿನಲ್ಲಿಯೂ ಪ್ರಯಾಸಕರ ಗೆಲುವು ಕಂಡಿದ್ದರು. ಎರಡನೇ ಸೆಟ್ ಅನ್ನು ಟೈಬ್ರೇಕರ್ನಲ್ಲಿ ಜಯಿಸಿದ ವಿಟ್ಟೋ, ಪಂದ್ಯವನ್ನು ಮೂರು ಸೆಟ್ಗಳಿಗೆ ಕೊಂಡೊಯ್ದರು. ಆದರೆ, ಹಾಲಿ ಚಾಂಪಿಯನ್ ಕೆರ್ಬರ್ ನಿರ್ಣಾಯಕ ಸೆಟ್ ಅನ್ನು ನಿರಾಯಾಸವಾಗಿ ಜಯಿಸಿ ಮುಂದಿನ ಹಂತಕ್ಕೆ ಧಾವಿಸಿದರು.
ಮುಗುರುಜಾ ತಿಣುಕಾಟ
ಮಹಿಳೆಯರ ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ, ಅಮೆರಿಕದ ಸಮಂತಾ ಕ್ರಾರ್ಡ್ ವಿರುದ್ಧ 7-5, 6-4 ನೇರ ಸೆಟ್ಗಳಲ್ಲಿ ಗೆಲುವು ಪಡೆದರಾದರೂ, ಕೊಂಚ ತಿಣುಕಿದರು. ಕಳೆದ ಆವೃತ್ತಿಯಲ್ಲಿ ತೃತೀಯ ಸುತ್ತಿಗೇ ನಿರ್ಗಮಿಸಿದ್ದ 2012ರ ಯುಎಸ್ ಓಪನ್ ಚಾಂಪಿಯನ್ ಮುಗುರುಜಾ, ಈ ಬಾರಿ ಆಸ್ಟ್ರೇಲಿಯಾ ಓಪನ್ ಗೆಲ್ಲುವ ಗುರಿ ಹೊತ್ತಿದ್ದಾರೆ. ಇತ್ತ ಇತ್ತೀಚೆಗಷ್ಟೇ ಮುಕ್ತಾಯ ಕಂಡ, ಈ ಬಾರಿಯ ಸಿಡ್ನಿ ಅಂತಾರಾಷ್ಟ್ರೀಯ ಪ್ರಶಸ್ತಿ ಜಯಿಸಿದ ಕೆನಡಾದ ಯುವ ಆಟಗಾರ್ತಿ ಯುಜೇನಿ ಬೌಚರ್ಡ್ ಚೀನಾ ಆಟಗಾರ್ತಿ ಶುಆಯಿ ಪೆಂಗ್ ವಿರುದ್ಧ 7-6 (7/5), 6-2 ಸೆಟ್ಗಳಲ್ಲಿ ಜಯ ಪಡೆದರು.
ಮರ್ರೆ, ಫೆಡರರ್ ಜಯದ ಓಟ
ಪ್ರಶಸ್ತಿ ಫೆವರಿಟ್ ಪೈಕಿ ಒಬ್ಬರಾಗಿರುವ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಎರಡನೇ ಸುತ್ತಿನ ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೆವ್ ವಿರುದ್ಧ 6-3, 6-0, 6-2 ನೇರ ಸೆಟ್ಗಳಲ್ಲಿ ಗೆಲುವು ಪಡೆದರೆ, ಹದಿನೇಳು ಗ್ರಾಂಡ್ಸ್ಲಾಮ್ಗಳ ಒಡೆಯ ರೋಜರ್ ಫೆಡರರ್, ಅಮೆರಿಕದ ನೋಹ್ ರೂಬೆನ್ ವಿರುದ್ಧ 7-5, 6-3, 7-6 (7/3) ಸೆಟ್ಗಳಲ್ಲಿ ಗೆಲುವು ಪಡೆದರು. ಗಾಯದ ಸಮಸ್ಯೆಯಿಂದಾಗಿ ಕಳೆದ ಆರು ತಿಂಗಳಿನಿಂದ ಟೆನಿಸ್ ಕೋರ್ಟ್ನಿಂದ ಆಚೆ ಉಳಿದಿದ್ದ ಫೆಡರರ್, ಟೂರ್ನಿಯಲ್ಲಿ ಹದಿನೇಳನೇ ಶ್ರೇಯಾಂಕ ಪಡೆದಿದ್ದು, 21 ವರ್ಷದ ರೂಬೆನ್ ವಿರುದ್ಧದ ಗೆಲುವಿಗಾಗಿ ಬೆವರು ಹರಿಸಬೇಕಾಯಿತು.
ಇನ್ನು ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ವಿಸ್ನ ಮತ್ತೋರ್ವ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ, ಅಮೆರಿಕದ ಸ್ಟೀವ್ ಜಾನ್ಸನ್ ವಿರುದ್ಧ 3-6, 4-6, 4-6ರ ಮೂರು ನೇರ ಸೆಟ್ಗಳಲ್ಲಿ ಜಯಶಾಲಿಯಾದರು. ಅಂತೆಯೇ ಜಪಾನ್ನ ಕೀ ನಿಶಿಕೊರಿ ್ರಾನ್ಸ್ನ ಜೇಮ್ಸ್ ಚಾರ್ಡಿಯನ್ನು 6-3, 6-4, 6-3 ಸೆಟ್ಗಳಲ್ಲಿ ಮಣಿಸಿ ತೃತೀಯ ಸುತ್ತಿಗೆ ಅರ್ಹತೆ ಪಡೆದರು.
ಸಾನಿಯಾ, ಬೋಪಣ್ಣ ಜಯದ ಆರಂಭ
ಋತುವಿನ ಮೊದಲ ಗ್ರಾಂಡ್ಸ್ಲಾಮ್ ಟೂರ್ನಿಯಲ್ಲಿ ಭಾರತದ ನಂ.1 ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜಯದ ಆರಂಭ ಕಂಡಿದ್ದಾರೆ. ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜೆಕ್ ಆಟಗಾರ್ತಿ ಬಾರ್ಬೊರಾ ಸ್ಟ್ರೈಕೋವಾ ಜತೆಗೆ ಬ್ರಿಟಿಷ್ ಜೋಡಿ ಜೋಸ್ಲಿನ್ ರೇ ಹಾಗೂ ಅನ್ನಾ ಸ್ಮಿತ್ ವಿರುದ್ಧ 6-3, 6-1 ನೇರ ಸೆಟ್ಗಳಲ್ಲಿ ಇಂಡೋ-ಜೆಕ್ ಜೋಡಿ ಜಯಶಾಲಿಯಾಯಿತು. ಕಳೆದ ಸಾಲಿನಲ್ಲಿ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗೆ ಪ್ರಶಸ್ತಿ ಜಯಿಸಿದ್ದ ಸಾನಿಯಾ, ಬಾರ್ಬೊರಾ ಜತೆಗೆ ಈ ಬಾರಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇನ್ನು, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಕೂಡ ಭರ್ಜರಿ ಶುಭಾರಂಭ ಮಾಡಿದರು. ಉರುಗ್ವೆಯ ಜತೆಯಾಟಗಾರ ಪ್ಯಾಬ್ಲೊ ಕ್ಯುವಾಸ್ ಜತೆಗೆ ಬೆಜಿಲ್ ಮತ್ತು ಅರ್ಜೆಂಟೀನಾ ಜೋಡಿ ಥಾಮಸ್ ಬೆಲ್ಲೂಕಿ ಹಾಗೂ ಮ್ಯಾಕ್ಸಿಮೊ ಗೊನ್ಸಾಲೆಸ್ ವಿರುದ್ಧ 6-4, 7-6 (7/4) ಸೆಟ್ಗಳಲ್ಲಿ ಬೋಪಣ್ಣ ಗೆಲುವು ಪಡೆದರು. ಅಂದಹಾಗೆ ತವರಿನಲ್ಲಿ ನಡೆದ ಚೆನ್ನೈ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಜೀವನ್ ನೆಡುಚಳಿಯನ್ ಜತೆಗೆ ಪ್ರಶಸ್ತಿ ಜಯಿಸಿದ್ದ ಬೋಪಣ್ಣ, ಇದೀಗ ಆಸೀಸ್ ಓಪನ್ ಮೇಲೆ ಚಿತ್ತ ಹರಿಸಿದ್ದಾರೆ.
