ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಉದ್ಯಮ ಕ್ಷೇತ್ರದಲ್ಲೂ ದೊಡ್ಡ ಕನಸು ಕಾಣುತ್ತಿದ್ದಾರೆ. ಭಾರತೀಯ ಕ್ರೀಡಾ ಬ್ರ್ಯಾಂಡ್‌ಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಉದ್ಯಮ ಕ್ಷೇತ್ರದಲ್ಲೂ ದೊಡ್ಡ ಕನಸು ಕಾಣುತ್ತಿದ್ದಾರೆ. ಕೇವಲ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಯಾಗಿ ಉಳಿಯದೆ, ಭಾರತೀಯ ಕ್ರೀಡಾ ಬ್ರ್ಯಾಂಡ್‌ಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದಾರೆ.

ಇದೀಗ ಲಿಂಕ್ಡ್‌ಇನ್‌ಗೆ ಪ್ರವೇಶಿಸಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲೇ ಉದ್ಯಮದ ಕುರಿತಾದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿರುವ ಕೊಹ್ಲಿ, ಅಜಿಲಿಟಾಸ್ ಸ್ಪೋರ್ಟ್ಸ್‌ನಲ್ಲಿ ಹೂಡಿಕೆದಾರರಾಗಿ ಮತ್ತು one8worldನ ಸಹ-ಸಂಸ್ಥಾಪಕ ಹಾಗೂ ಸಹ-ಸೃಷ್ಟಿಕರ್ತರಾಗಿ ತಮ್ಮ ಪಾತ್ರವನ್ನು ಸ್ಪಷ್ಟಪಡಿಸಿದ್ದಾರೆ.

ಲಿಂಕ್ಡ್‌ಇನ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ: ಏನಿದು ಹೊಸ ಪ್ರಯತ್ನ?

ಸಾಮಾನ್ಯವಾಗಿ ಲಿಂಕ್ಡ್‌ಇನ್ ಅನ್ನು ಉದ್ಯಮಿಗಳು, ವೃತ್ತಿಪರರು, ಕಂಪನಿಗಳ ಮುಖ್ಯಸ್ಥರು ಮತ್ತು ಉದ್ಯೋಗಾವಕಾಶಗಳನ್ನು ಹುಡುಕುವವರು ಹೆಚ್ಚಾಗಿ ಬಳಸುತ್ತಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಈ ವೇದಿಕೆಗೆ ಸೇರುವ ಮೂಲಕ ಬ್ಯುಸಿನೆಸ್ ಮೇಲಿನ ಆಸಕ್ತಿಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ತಮ್ಮ ಮೊದಲ ಪೋಸ್ಟ್‌ನಲ್ಲಿ ಕ್ರೀಡಾ ಉತ್ಪನ್ನಗಳ ತಯಾರಿಕೆ, ಗ್ರಾಹಕರನ್ನು ತಲುಪುವ ಬ್ರ್ಯಾಂಡ್‌ಗಳ ನಿರ್ಮಾಣ ಮತ್ತು ಕ್ರೀಡಾ ಉತ್ಪನ್ನಗಳ ವಿತರಣೆಯನ್ನು ಒಳಗೊಂಡ ವ್ಯವಸ್ಥೆಯನ್ನು ಭಾರತದಲ್ಲೇ ರೂಪಿಸುವುದು ತಮ್ಮ ಗುರಿ ಎಂದು ಹೇಳಿದ್ದಾರೆ. ಭಾರತವು ಕೇವಲ ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಸೃಷ್ಟಿಸುವ ದೇಶವಾಗಿ ಉಳಿಯದೆ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಲ್ಲ ಕ್ರೀಡಾ ಬ್ರ್ಯಾಂಡ್‌ಗಳನ್ನೂ ನಿರ್ಮಿಸಬೇಕು ಎಂಬುದು ಅವರ ಗುರಿ.

₹300 ಕೋಟಿ ಪೂಮಾ ಒಪ್ಪಂದದ ಬದಲು ಸ್ವಂತ ಉದ್ಯಮದತ್ತ ಗಮನ?

ವಿರಾಟ್ ಕೊಹ್ಲಿ ಈ ಹಿಂದೆ ಪೂಮಾ ಸೇರಿದಂತೆ ಪ್ರಮುಖ ಕ್ರೀಡಾ ಬ್ರ್ಯಾಂಡ್‌ಗಳೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ಇದೀಗ ಅವರು ಕೇವಲ ಬ್ರ್ಯಾಂಡ್ ರಾಯಭಾರಿಯಾಗಿರುವುದಕ್ಕಿಂತ ಉದ್ಯಮದ ಮಾಲೀಕತ್ವ ಮತ್ತು ಬೆಳವಣಿಗೆಯಲ್ಲಿ ಪಾಲುದಾರರಾಗುವತ್ತ ಗಮನ ಹರಿಸಿದ್ದಾರೆ. ಹಿಂದಿನ ವರದಿಗಳ ಪ್ರಕಾರ, ಪೂಮಾ ಜೊತೆಗಿನ ಒಪ್ಪಂದವನ್ನು ವಿಸ್ತರಿಸುವ ಅವಕಾಶದ ಮೌಲ್ಯ ಸುಮಾರು ₹300 ಕೋಟಿ ಎಂದು ಅಂದಾಜಿಸಲಾಗಿತ್ತು. ಅದನ್ನು ಮುಂದುವರಿಸುವ ಬದಲು ಕೊಹ್ಲಿ ಅಜಿಲಿಟಾಸ್ ಸ್ಪೋರ್ಟ್ಸ್‌ನಲ್ಲಿ ಸುಮಾರು ₹40 ಕೋಟಿ ಹೂಡಿಕೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಏನಿದು ಅಜಿಲಿಟಾಸ್ ಸ್ಪೋರ್ಟ್ಸ್?

ಅಜಿಲಿಟಾಸ್ ಸ್ಪೋರ್ಟ್ಸ್ (Agilitas Sports) ಕ್ರೀಡಾ ಉಡುಪು ಮತ್ತು ಆಕ್ಟಿವ್‌ವೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಂಪನಿ. 2023ರಲ್ಲಿ ಪೂಮಾ ಇಂಡಿಯಾ ಮತ್ತು ಆಗ್ನೇಯ ಏಷ್ಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ, ಅತುಲ್ ಬಜಾಜ್ ಮತ್ತು ಅಮಿತ್ ಪ್ರಭು ಈ ಕಂಪನಿಯನ್ನು ಸ್ಥಾಪಿಸಿದರು. ಕಂಪನಿಯ ವಿಶೇಷತೆ ಎಂದರೆ ಉತ್ಪನ್ನ ವಿನ್ಯಾಸದಿಂದ ಹಿಡಿದು ಉತ್ಪಾದನೆ ಮತ್ತು ಚಿಲ್ಲರೆ ಮಾರಾಟದವರೆಗೆ ವಿವಿಧ ಹಂತಗಳನ್ನು ಒಂದೇ ಉದ್ಯಮ ವ್ಯವಸ್ಥೆಯಡಿ ಸಂಯೋಜಿಸುವ ಪ್ರಯತ್ನ. ಇದರಿಂದ ಭಾರತೀಯ ಕ್ರೀಡಾ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುವ ಅವಕಾಶವಿದೆ.

'ಪ್ರತಿಯೊಂದು ಕ್ರೀಡೆಯನ್ನೂ ಭಾರತ ಆಚರಿಸಬೇಕು'

ಕೊಹ್ಲಿಯ ಮೊದಲ ಲಿಂಕ್ಡ್‌ಇನ್ ಪೋಸ್ಟ್‌ನ ಪ್ರಮುಖ ಅಂಶವೆಂದರೆ ಭಾರತದ ಕ್ರೀಡಾ ಸಂಸ್ಕೃತಿಯ ಬಗ್ಗೆ ಅವರ ಕನಸು. ಪ್ರತಿಯೊಂದು ಕ್ರೀಡೆಯನ್ನೂ ಜನರು ಅನುಸರಿಸುವ, ಆಚರಿಸುವ ಮತ್ತು ಆಡುವ ಭಾರತವನ್ನು ತಾವು ಯಾವಾಗಲೂ ನೋಡಲು ಬಯಸಿದ್ದಾಗಿ ಅವರು ಹೇಳಿದ್ದಾರೆ. ಹೊಸ ಪೀಳಿಗೆಯ ಕ್ರೀಡಾಪಟುಗಳು ಭಾರತವು ವಿಶ್ವದರ್ಜೆಯ ಪ್ರತಿಭೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಇದೇ ಸಾಮರ್ಥ್ಯವನ್ನು ಬಳಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ಭಾರತೀಯ ಬ್ರ್ಯಾಂಡ್‌ಗಳನ್ನು ನಿರ್ಮಿಸುವ ಸಮಯ ಬಂದಿದೆ ಎಂಬುದು ಅವರ ಅಭಿಪ್ರಾಯ.