ವಡೋದರ(ಸೆ.06):  2011ರ ವಿಶ್ವಕಪ್ ಟೂರ್ನಿ ಬಳಿಕ ಹಲವು ದಿಗ್ಗಜ ಕ್ರಿಕೆಟಿಗರು ಟೀಂ ಇಂಡಿಯಾದಿಂದ ದೂರ ಉಳಿದರು. ಇದರಲ್ಲಿ ವೇಗಿ ಮುನಾಫ್ ಪಟೇಲ್ ಕೂಡ ಒಬ್ಬರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದ ಮುನಾಫ್ ಪಟೇಲ್ ವಿರುದ್ಧ ಈಗಾಗಲೇ ಹಲವು ಆರೋಪಗಳಿವೆ. ಇದೀಗ ಕ್ರಿಕೆಟ್ ಮುಖ್ಯಸ್ಥನಿಗೆ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಮುನಾಫ್ ಪಟೇಲ್ ಗುರಿಯಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಹೀರೋ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ

ವಡೋದರ ಕ್ರಿಕೆಟ್ ಹಿತರಕ್ಷಕ ಸಮಿತಿ ಮುಖ್ಯಸ್ಥ ದೇವೇಂದ್ರ ಸುರ್ತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ವತಃ  ದೇವೇಂದ್ರ ಸುರ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುನಾಫ್ ಪಟೇಲ್ ವಿರುದ್ದ ಭ್ರಷ್ಟಾಚಾರ ಆರೋಪವಿದೆ. ಈ ಕುರಿತು ನಾನು ಕ್ರಮಕ್ಕೆ ಒತ್ತಾಯಿಸಿದ್ದೇನೆ. ಇದನ್ನೇ ಆಧಾರವಾಗಿಟ್ಟುಕೊಂಡ ಮುನಾಫ್ ಪಟೇಲ್, ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನವಪುರ ಪೊಲೀಸ್ ಠಾಣೆಯಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಟಿ10 ಲೀಗ್‌ನಲ್ಲಿ ಈ ಬಾರಿ ಭಾರತದ 8 ಕ್ರಿಕೆಟಿಗರು..

ನನ್ನ  ಹಾಗೂ ಕುಟುಂಬಕ್ಕೆ ಯಾವುದೇ ಸಮಸ್ಯೆಯಾದರೆ ಅದಕ್ಕೆ ಮುನಾಫ್ ಪಟೇಲ್ ನೇರ ಹೊಣೆ ಎಂದಿದ್ದಾರೆ. ಆದರೆ ದೇವೇಂದ್ರ ಸುರ್ತಿ ಯಾವುದೇ ಲಿಖಿತ ದೂರು ನೀಡಿಲ್ಲ. ಹೀಗಾಗಿ ಮುನಾಫ್ ಪಟೇಲ್ ವಿರುದ್ಧ FIR ದಾಖಲಾಗಿಲ್ಲ. ಇತ್ತ ದೇವೇಂದ್ರ ಸುರ್ತಿ ಆರೋಪಗಳನ್ನು ಮುನಾಫ್ ಪಟೇಲ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ವಿನಾ ಕಾರಣ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ರಜಪೂತನ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ನನ್ನ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಲಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಇಷ್ಟೇ ಅಲ್ಲ ಇದೀಗ ದೇವೇಂದ್ರ ಸುರ್ತಿ ಕೊಲೆ ಬೆದರಿಕೆ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.