ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ನೋವಾಕ್‌ ಜೋಕೋವಿಚ್‌ ಹಾಗೂ ಕಾರ್ಲೊಸ್‌ ಆಲ್ಕರಜ್‌ ಮುಖಾಮುಖಿಯಾಗಲಿದ್ದಾರೆ. ಜೋಕೋವಿಚ್‌ ಫ್ರಿಟ್ಜ್‌ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರೆ, ಆಲ್ಕರಜ್‌ ಲೆಹೆಕ್ಕಾ ವಿರುದ್ಧ ಗೆಲುವು ಸಾಧಿಸಿದರು.

ನ್ಯೂಯಾರ್ಕ್‌: ಈ ಬಾರಿ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದ ಸರ್ಬಿಯಾದ ದಿಗ್ಗಜ ನೋವಾಕ್‌ ಜೋಕೋವಿಚ್‌ ಹಾಗೂ ಸ್ಪೇನ್‌ನ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇಬ್ಬರ ನಡುವಿನ ಅತಿ ಮಹತ್ವದ ಪಂದ್ಯ ಶನಿವಾರ ನಡೆಯಲಿದೆ.

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಆಲ್ಕರಜ್‌, ಚೆಕ್‌ ಗಣರಾಜ್ಯದ ಜಿರಿ ಲೆಹೆಕ್ಕಾ ವಿರುದ್ಧ 6-4, 6-2, 6-4 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದು 2023ರ ಬಳಿಕ ಹಾರ್ಡ್‌ ಕೋರ್ಟ್‌ನಲ್ಲಿ ಆಲ್ಕರಜ್‌ಗೆ ಮೊದಲ ಸೆಮಿಫೈನಲ್‌. ಒಟ್ಟಾರೆ 22 ವರ್ಷದ ಆಲ್ಕರಜ್‌ ಗ್ರ್ಯಾನ್‌ಸ್ಲಾಂನಲ್ಲಿ 9ನೇ ಬಾರಿ ಸೆಮಿಫೈನಲ್‌ಗೇರಿದ್ದಾರೆ.

ಮತ್ತೊಂದೆಡೆ ಬುಧವಾರ ಬೆಳಗ್ಗೆ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಜೋಕೋವಿಚ್‌, ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ 6-3, 7-5, 3-6, 6-4 ಸೆಟ್‌ಗಳಲ್ಲಿ ಜಯಗಳಿಸಿದರು.

ಜೋಕೋ ಹಾಗೂ ಆಲ್ಕರಜ್‌ ಈವರೆಗೂ 8 ಬಾರಿ ಮುಖಾಮುಖಿಯಾಗಿದ್ದು, ಜೋಕೋ 5-3 ಗೆಲುವಿನ ದಾಖಲೆ ಹೊಂದಿದ್ದಾರೆ. ಇಬ್ಬರ ನಡುವಿನ ಕೊನೆ 2 ಪಂದ್ಯಗಳಾದ ಒಲಿಂಪಿಕ್ಸ್‌, ವಿಂಬಲ್ಡನ್‌ನಲ್ಲಿ ಜೋಕೋ ಗೆದ್ದಿದ್ದರು. ಜೋಕೋ 5ನೇ ಯುಎಸ್‌ ಓಪನ್‌ ಹಾಗೂ ಒಟ್ಟಾರೆ 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದರೆ, ಆಲ್ಕರಜ್‌ 2022ರ ಬಳಿಕ ಮತ್ತೊಂದು ಯುಎಸ್‌ ಓಪನ್‌ ಕಿರೀಟ ಗೆಲ್ಲುವ ಕಾತರದಲ್ಲಿದ್ದಾರೆ.

ಸಬಲೆಂಕಾ, ಪೆಗುಲಾ ಸೆಮಿಫೈನಲ್‌ಗೆ ಲಗ್ಗೆ

ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ ಹಾಗೂ ಕಳೆದ ಬಾರಿ ರನ್ನರ್‌-ಅಪ್‌ ಜೆಸ್ಸಿಕಾ ಪೆಗುಲಾ ಸೆಮಿಫೈನಲ್‌ಗೇರಿದ್ದಾರೆ. 2023ರ ವಿಂಬಲ್ಡನ್‌ ಚಾಂಪಿಯನ್‌ ಮಾರ್ಕೆಟಾ ವೊಂಡ್ರೊಸೋವಾ ಗಾಯಗೊಂಡಿದ್ದರಿಂದ ಸಬಲೆಂಕಾ ವಾಕ್‌ಓವರ್‌ ಪಡೆದು ಸೆಮೀಸ್‌ಗೇರಿದರು. ಅಮೆರಿಕದ 4ನೇ ಶ್ರೇಯಾಂಕಿತೆ ಪೆಗುಲಾ ಅವರು, 2024ರ ವಿಂಬಲ್ಡನ್‌ ಚಾಂಪಿಯನ್‌ ಬಾರ್ಬೊರಾ ಕ್ರೆಜಿಕೋವಾ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಸಬಲೆಂಕಾ-ಪೆಗುಲಾ ಸೆಣಸಾಡಲಿದ್ದಾರೆ.

ಮೊದಲ ಗ್ರ್ಯಾನ್‌ಸ್ಲಾಂ ಕ್ವಾರ್ಟರ್‌ಗೆ ಯೂಕಿ

ಭಾರತದ ಟೆನಿಸಿಗ ಯೂಕಿ ಭಾಂಬ್ರಿ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅವರು ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ನ್ಯೂಜಿಲೆಂಡ್‌ನ ಮೈಕಲ್‌ ವೇನಸ್‌ ಜೊತೆಗೂಡಿ ಆಡುತ್ತಿದ್ದು, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಕೆವಿನ್ ಕ್ರಾವೀಟ್ಜ್‌-ಟಿಮ್‌ ಪ್ಯುಟ್ಜ್‌ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಯೂಕಿ ಕಳೆದ ವರ್ಷ ಫ್ರೆಂಚ್ ಓಪನ್‌, ವಿಂಬಲ್ಡನ್‌ನಲ್ಲಿ 3ನೇ ಸುತ್ತು ತಲುಪಿದ್ದರು. ಆದರೆ ಜೂನಿಯರ್‌ ವಿಭಾಗದಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು. ಯುವ ಆಟಗಾರ್ತಿ ಮಾಯಾ ರಾಜೇಶ್ವರನ್‌ 2ನೇ ಸುತ್ತಿನಲ್ಲಿ ಸೋಲುಂಡರು.