ಕ್ರೈಸ್ಟ್’ಚರ್ಚ್: ಭಯೋತ್ಪಾದಕರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಶನಿವಾರದಿಂದ ಕ್ರೈಸ್ಟ್‌ಚರ್ಚ್ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಬೇಕಿದ್ದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಮೂರನೇ ಟೆಸ್ಟ್ ಪಂದ್ಯ ರದ್ದಾಗಿದೆ. ಅಷ್ಟೇ ಅಲ್ಲ, ಬಾಂಗ್ಲಾದೇಶ ಪ್ರವಾಸ ಮೊಟಕುಗೊಳಿಸಿ ತವರಿನತ್ತ ಹಿಂದಿರುಗಲು ನಿರ್ಧರಿಸಿದೆ.

ಮಸೀದಿಯಲ್ಲಿ ಶೂಟೌಟ್: ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗರು..!

ಶುಕ್ರವಾರ ಆಟಗಾರರು ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ಆಗಮಿಸುವುದಕ್ಕೂ ಮುನ್ನ ಮಸೀದಿಗೆ ತೆರಳಿ ಪ್ರರ್ಥನೆ ಸಲ್ಲಿಸಿಬರಲು ಹೋಗುವ ವೇಳೆಯಲ್ಲೇ ಉಗ್ರರು ಸ್ಟೇಡಿಯಂಗೆ ಸಮೀಪದ ಎರಡು ಮಸೀದಿಗಳ ಮೇಲೆ ಗುಂಡಿನ ಮೊರೆತ ನಡೆಸಿದ್ದು, ಬಾಂಗ್ಲಾ ಆಟಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಕ್ತಾರ ಜಲಾಲ್ ಯೂನಸ್ ಘಟನೆ ಬಗ್ಗೆ ವಿವರಿಸಿದ್ದು, ಬಹುತೇಕ ಆಟಗಾರರು ಆಗಷ್ಟೇ ಸ್ಟೇಡಿಯಂಗೆ ಬಂದು ಕ್ರೈಸ್ಟ್‌ಚರ್ಚ್‌ನ ಒಳಕ್ಕೆ ಪ್ರವೇಶಿಸಿದ್ದರು. ಅದೃಷ್ಟವಶಾತ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆ. ಆದರೆ ಆಟಗಾರರು ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ
ಬಳಿಕ ಎಲ್ಲರೂ ಸುರಕ್ಷಿತವಾಗಿ ಹೋಟೆಲ್‌ಗೆ ತಲುಪಿದ್ದೇವೆ ಎಂದು ತಿಳಿಸಿದ್ದಾರೆ.

ಟ್ವೀಟ್ ವೈರಲ್: ‘ಉಗ್ರರ ದಾಳಿಯಿಂದ ಅದೃಷ್ಟವಶಾತ್ ತಂಡದ ಎಲ್ಲಾ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಮಾಧ್ಯಮ ವರದಿಯಂತೆ ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಸ್ಥಳೀಯರು ಸಾವಿಗೀಡಾಗಿದ್ದಾರೆ ಎಂದು ಗೊತ್ತಾಗಿದೆ’ ಎಂದು ಘಟನೆಗೆ ಸಂಬಂಧಿಸಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಟ್ವೀಟ್ ಮಾಡಿದ್ದಾರೆ. ಕೆಲ ಕ್ಷಣದಲ್ಲೇ ಅವರ ಟ್ವೀಟ್ ವೈರಲ್ ಆಗಿದೆ. 

ಪ್ರವಾಸ ಮೊಟಕು: ಐಸಿಸಿ ಒಪ್ಪಿಗೆ: ಉಗ್ರರ ದಾಳಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಒತ್ತಡದ ವಾತಾವರಣವಿದ್ದು, ಆಟಗಾರರೆಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಐಸಿಸಿ ಟೆಸ್ಟ್ ಸರಣಿ ರದ್ದುಗೊಳಿಸುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಹೇಳಿದೆ. ಐಸಿಸಿ ಪ್ರತಿನಿಧಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರವಾಸ ಮೊಟಕುಗೊಳಿಸಿ ಹಿಂದಿರುಗುವ ಬಾಂಗ್ಲಾ ನಿರ್ಧಾರಕ್ಕೆ ತಲೆದೂಗಿದೆ. ಆಟಗಾರರ ಸುರಕ್ಷತೆ ದೃಷ್ಟಿಯಿಂದ ಟೆಸ್ಟ್ ರದ್ದುಗೊಳಿಸಲು ಒಪ್ಪಿಗೆ ಸೂಚಿಸಿದೆ.