ವೆಲ್ಲಿಂಗ್ಟನ್[ಮಾ.15]: ಕ್ರಿಸ್ಟ್’ಚರ್ಚ್ ಸಮೀಪದಲ್ಲಿ ಅಲ್ ನೂರ್ ಮಸೀದಿಯ ಬಳಿ ನಡೆದ ಶೂಟೌಟ್’ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಈ ದಾಳಿಯು ನ್ಯೂಜಿಲೆಂಡ್ ದೇಶವನ್ನು ಬೆಚ್ಚಿಬೀಳಿಸಿದ್ದು, ದಾಳಿ ನಡೆಸಿದ ಸಂಘಟನೆಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 25 ಜನರ ಪರಿಸ್ಥಿತಿ ಗಂಭೀರವಾಗಿದೆ. ದಾಳಿಯನ್ನು ಲೈವ್ ಸ್ಟ್ರೀಮ್ ನಡೆಸಲಾಗಿದ್ದು, ವಾಹನಗಳಿಗೆ ಅಳವಡಿಸಲಾಗಿದ್ದ ಐಇಡಿ ಬಾಂಬ್’ಗಳನ್ನು ಭದ್ರತಾ ಪಡೆಗಳು ನಿಷ್ಕ್ರೀಯಗೊಳಿಸಲಾಗಿದೆ. ಈ ಘಟನೆ ಸಂಬಂಧ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದರ ಬೆನ್ನಲ್ಲೇ ಮಾರ್ಚ್ 16ರಂದು ಬಾಂಗ್ಲಾದೇಶ-ನ್ಯೂಜಿಲೆಂಡ್ ನಡುವೆ ಹ್ಯಾಗ್ಲೇ ಓವಲ್’ನಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದು ಮಾಡಲಾಗಿದೆ.

ಕ್ರಿಸ್ಟ್’ಚರ್ಚ್ ಸಮೀಪದ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವಾರು ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆ ಸಂಭವಿಸುವ ವೇಳೆಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಮಸೀದಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಈ ಕುರಿತಂತೆ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಟ್ವೀಟ್ ಮಾಡಿ ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ಇದೇ ವೇಳೆ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್’ಮನ್ ತಮೀಮ್ ಇಕ್ಬಾಲ್ ಟ್ವೀಟ್ ಮಾಡಿದ್ದು, ಬಂದೂಕು ದಾಳಿಕೋರರಿಂದ ನಮ್ಮ ತಂಡ ಬಚಾವಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ ನಮ್ಮನ್ನು ಕಾಪಾಡಿದೆ ಎಂದು ಬರೆದುಕೊಂಡಿದ್ದಾರೆ.

ಮಸೀದಿ ಸಮೀಪ ಬಂದೂಕು ಧಾರಿಯೊಬ್ಬ ಮಷಿನ್ ಗನ್ ಮೂಲಕ ದಾಳಿ ನಡೆಸಿದ್ದಾನೆ.  ಈ ಘಟನೆಯನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಧನ್ ತೀವ್ರವಾಗಿ ಖಂಡಿಸಿದ್ದು, ಇದು ದೇಶದ ಕರಾಳ ದಿನ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಲಾಹೋರ್’ನ ಗಡಾಫಿ ಮೈದಾನದ ಸಮೀಪ 2009ರ ಮಾರ್ಚ್ 3ರಂದು ಶ್ರೀಲಂಕಾ ಕ್ರಿಕೆಟಿಗರು ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 12 ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಲಂಕಾದ 6 ಸದಸ್ಯರು ಗಾಯಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ 6 ಪೊಲೀಸರು ಹಾಗೂ ಇಬ್ಬರು ನಾಗರೀಕರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.