ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಆದರೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಉಗ್ರರ ಹಾಗೂ ಸೈಬರ್ ಕಳ್ಳರ ಭೀತಿ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು: ಕಳೆದ ಬಾರಿ ಟೋಕಿಯೋದಲ್ಲಿ ಒಲಿಂಪಿಕ್ಸ್‌ ನಡೆದಾಗ ಜಪಾನ್‌ಗೆ ಪ್ರಮುಖ ಸವಾಲಾಗಿದ್ದು ಕೋವಿಡ್‌. ಈ ಬಾರಿ ಪ್ಯಾರಿಸ್‌ಗೆ ಪ್ರಮುಖ ಸವಾಲು ಭಯೋತ್ಪಾದಕರದ್ದು. ಐಸಿಸ್‌ ಸೇರಿ ಕೆಲ ಉಗ್ರ ಸಂಘಟನೆಗಳಿಂದ ಪ್ಯಾರಿಸ್‌ನಲ್ಲಿ ದಾಳಿ ಆತಂಕವಿದೆ. ಹೀಗಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಪ್ಯಾರಿಸ್‌ ಮಾತ್ರವಲ್ಲದೆ ಫ್ರಾನ್ಸ್‌ನ ವಿವಿಧ ಕಡೆಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಗಸ್ತು ಹೆಚ್ಚಿಸಿ, ಅಪಾರ ಪ್ರಮಾಣದಲ್ಲಿ ಸಿಸಿಟೀವಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ. ಶಂಕಿತ ದಾಳಿಯನ್ನು ಹಿಮ್ಮೆಟ್ಟಿಸಲು ಅಲ್ಲಿನ ಸರ್ಕಾರ ಸರ್ವ ರೀತಿಯಲ್ಲಿ ಸಜ್ಜಾಗಿದೆ.

ಪ್ಯಾರಿಸ್‌ಗಿದೆ ಭಯೋತ್ಪಾದಕ ದಾಳಿಯ ಕರಾಳ ಇತಿಹಾಸ!

ಈ ಸಲ ಒಲಿಂಪಿಕ್ಸ್‌ ಆಯೋಜಿಸುತ್ತಿರುವ ಪ್ಯಾರಿಸ್‌ಗೆ ಭಯೋತ್ಪಾದಕರ ದಾಳಿಯ ಕರಾಳ ಇತಿಹಾಸವಿದೆ. 2015ರ ಜನವರಿಯಲ್ಲಿ ಪ್ಯಾರಿಸ್‌ ನಗರದಲ್ಲಿ ‘ಚಾರ್ಲೀ ಹೆಬ್ಡೋ’ ದಾಳಿ ಮೂಲಕ ಅಲ್‌ ಖೈದಾ ಉಗ್ರರು 10ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಪ್ಯಾರಿಸ್‌ ನಗರದಲ್ಲಿ ಸುಮಾರು 10 ಉಗ್ರರು 130ಕ್ಕೂ ಹೆಚ್ಚು ನಾಗರಿಕರನ್ನು ಶೂಟೌಟ್‌, ಬಾಂಬ್‌ ಮೂಲಕ ಹತ್ಯೆಗೈದಿದ್ದರು. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Paris Olympics 2024: ಈ 7 ಕ್ರೀಡೆಗಳಲ್ಲಿ ಭಾರತಕ್ಕೆ ಇದೆ ಪದಕ ಭರವಸೆ..!

ಸೈಬರ್‌ ಕಳ್ಳರ ಕಾಟ

ಒಲಿಂಪಿಕ್ಸ್‌ಗೆ ಪ್ರತಿ ಬಾರಿಯಂತೆ ಈ ಬಾರಿಯೂ ಸೈಬರ್‌ ಕಳ್ಳರ ದಾಳಿ ಭೀತಿಯಿದೆ. 2018ರ ಚಳಿಗಾಲದ ಒಲಿಂಪಿಕ್ಸ್‌ ಸೈಬರ್‌ ದಾಳಿಗೆ ತುತ್ತಾಗಿತ್ತು. ಇದರಿಂದಾಗಿ ಇಂಟರ್ನೆಟ್‌ ಸೇವೆ ಸ್ಥಗಿತಗೊಂಡು ಒಲಿಂಪಿಕ್ಸ್‌ನ ವೆಬ್‌ಸೈಟ್‌ ಕೂಡಾ ಶಟ್‌ಡೌನ್‌ ಆಗಿತ್ತು. ಈ ಬಾರಿ ಸೈಬರ್‌ ದಾಳಿ ತಡೆಗಟ್ಟಲು ಫ್ರಾನ್ಸ್‌ ಸರ್ಕಾರ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಳಸಲಿದ್ದು, ಸೈಬರ್‌ ಪರಿಣಿತರ ವಿಶೇಷ ತಂಡಗಳನ್ನೂ ರಚಿಸಿದೆ.

ರಷ್ಯಾದಿಂದ ಎದುರಾಗುತ್ತಾ ಸಮಸ್ಯೆ?

ಡೋಪಿಂಗ್‌ ಹಾಗೂ ಉಕ್ರೇನ್‌ ಮೇಲಿನ ಯುದ್ಧದ ಕಾರಣಕ್ಕೆ ಈ ಬಾರಿಯೂ ರಷ್ಯಾ, ಒಲಿಂಪಿಕ್ಸ್‌ನಿಂದ ನಿಷೇಧಕ್ಕೊಳಗಾಗಿದೆ. ಈ ಕಾರಣಕ್ಕೆ ರಷ್ಯಾ, ಒಲಿಂಪಿಕ್ಸ್‌ನ ಖ್ಯಾತಿ ಕುಗ್ಗಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ ಎನ್ನುವ ಆರೋಪವಿದೆ. ಭ್ರಷ್ಟಾಚಾರ, ಭಯೋತ್ಪಾದನೆ ದಾಳಿ ಸಂಭವ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ಯಾರಿಸ್‌ ನಗರಿಗೆ 45,000+ ಸೈನಿಕರಿಂದ ಕಾವಲು!

ಒಲಿಂಪಿಕ್ಸ್‌ ವೇಳೆ ಭದ್ರತೆಗೆ ಸುಮಾರು 45 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಯು ಸೇನೆಯ 3 ಸಾವಿರ ಯೋಧರು, 18 ಸಾವಿರ ಫ್ರಾನ್ಸ್ ಸೈನಿಕರು, 35 ಸಾವಿರ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯರಾಗಿ ಮರು ಆಯ್ಕೆ

2,000+ ವಿದೇಶಿ ಯೋಧರ ನೆರವು

ಭದ್ರತಾ ವಿಚಾರದಲ್ಲಿ ಹಲವು ದೇಶಗಳು ಕೂಡಾ ಫ್ರಾನ್ಸ್‌ ಜೊತೆ ಕೈಜೋಡಿಸಿವೆ. ವಿವಿಧ ದೇಶಗಳಿಂದ 2,000ಕ್ಕೂ ಹೆಚ್ಚು ಸೈನಿಕರು ಪ್ಯಾರಿಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪೋಲೆಂಡ್‌ ತನ್ನ ಬಾಂಬ್‌ ನಿಗ್ರಹ ಘಟಕವನ್ನೂ ಪ್ಯಾರಿಸ್‌ಗೆ ಕಳುಹಿಸಿದೆ.

ಒಲಿಂಪಿಕ್ಸ್‌ ಭದ್ರತೆಗೆ ಭಾರತದ ಶ್ವಾನಪಡೆ

ಒಲಿಂಪಿಕ್ಸ್‌ ವೇಳೆ ಭದ್ರತೆಗೆ ಭಾರತದಿಂದಲೂ ಶ್ವಾನಪಡೆ, ಸೈನಿಕರನ್ನು ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ಹಾಗೂ ವಿಶೇಷ ಕಮಾಂಡೋ ಪಡೆಯಲ್ಲಿ ತರಬೇತಿ ಪಡೆದ 10 ನಾಯಿಗಳು ಹಾಗೂ 17 ಮಂದಿ ಭದ್ರತಾ ಸಿಬ್ಬಂದಿ ಒಲಿಂಪಿಕ್ಸ್‌ ವೇಳೆ ಕಾರ್ಯನಿರ್ವಹಿಸಲಿದ್ದಾರೆ.