Asianet Suvarna News Asianet Suvarna News

Paris Olympics 2024: ಈ 7 ಕ್ರೀಡೆಗಳಲ್ಲಿ ಭಾರತಕ್ಕೆ ಇದೆ ಪದಕ ಭರವಸೆ..!

ಇದೇ ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಲವು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಈ ಏಳು ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Paris Olympics 2024 Hockey to Boxing India hopes medal on these 7 sports kvn
Author
First Published Jul 25, 2024, 2:39 PM IST | Last Updated Jul 25, 2024, 3:24 PM IST

ಕಳೆದ ಬಾರಿಯಂತೆ ಈ ಸಲವೂ ಭಾರತ 85 ಪದಕಗಳಿಗೆ ಸ್ಪರ್ಧಿಸಲಿದೆ. ಆದರೆ ಹಿಂದೆಂದಿಗಿಂತಲೂ ಗರಿಷ್ಠ ಪದಕ ಸಾಧನೆಯ ಗುರಿ ಇಟ್ಟುಕೊಂಡಿದೆ. ಈ ಸಲ ಪ್ಯಾರಿಸ್‌ನಲ್ಲಿ ಭಾರತ ಪದಕ ಗೆಲ್ಲಬಹುದು ಎಂದು ಅಂದಾಜಿಸಲಾದ ಕ್ರೀಡೆಗಳು ಹಲವು. ಆದರಲ್ಲಿ ಪ್ರಮುಖವಾಗಿ 7 ಕ್ರೀಡೆಗಳಲ್ಲಿ ಭಾರತಕ್ಕೆ ಪದಕ ಒಲಿಯುವ ಎಲ್ಲಾ ಸಾಧ್ಯತೆಯಿದೆ.

1 ಅಥ್ಲೆಟಿಕ್ಸ್‌

ಅಥ್ಲೆಟಿಕ್ಸ್‌ನಲ್ಲಿ ಭಾರತ ಪದಕ ನಿರೀಕ್ಷೆ ಇಟ್ಟುಕೊಳ್ಳುವುದೇ ದೊಡ್ಡ ಸಾಧನೆ ಎಂಬುದು ಈಗ ಕೊಂಚ ಬದಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ಚಿನ್ನ ಗೆದ್ದ ನೀರಜ್‌ ಚೋಪ್ರಾ, ಭಾರತದ ಅಥ್ಲೆಟಿಕ್ಸ್‌ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದ್ದಾರೆ. ಜಾವೆಲಿನ್‌ನಲ್ಲಿ ಬಂಗಾರದ ನಿರೀಕ್ಷೆಯಿದ್ದರೆ, ಇನ್ನೂ ಕೆಲ ಸ್ಪರ್ಧೆಗಳಲ್ಲಿ ಫೈನಲ್‌, ಸೆಮಿಫೈನಲ್‌ಗೇರಲು ಭಾರತ ಕಾಯುತ್ತಿದೆ.

2 ಹಾಕಿ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ಯಶಸ್ಸು ತಂದುಕೊಟ್ಟ ಕ್ರೀಡೆ ಹಾಕಿ. 1980ರ ಬಳಿಕ ಕಳೆದ ಬಾರಿ ಅಂದರೆ ಬರೋಬ್ಬರಿ 41 ವರ್ಷ ಬಳಿಕ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ ಪದಕ ಗೆದ್ದಿತ್ತು. ಆ ಬಳಿಕ ಪ್ರೊ ಲೀಗ್‌, ವಿಶ್ವಕಪ್‌ಗಳಲ್ಲಿ ಸಾಧಾರಣ ಪ್ರದರ್ಶನ ತೋರಿದರೂ, ಈ ವರ್ಷ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಿದೆ.

ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯರಾಗಿ ಮರು ಆಯ್ಕೆ

3 ಬ್ಯಾಡ್ಮಿಂಟನ್‌

ಕಳೆದ 3 ಒಲಿಂಪಿಕ್ಸ್‌ಗಳಲ್ಲೂ ಭಾರತ ಬ್ಯಾಡ್ಮಿಂಟನ್‌ನಲ್ಲಿ ಪದಕ ಸಾಧನೆ ಮಾಡಿದೆ. ಈ ಸಲವೂ ಭಾರತ ಬ್ಯಾಡ್ಮಿಂಟನ್‌ ಪದಕ ಗೆಲ್ಲುವ ಫೇವರಿಟ್‌ ದೇಶ. ಒಲಿಂಪಿಕ್ಸ್‌ನಲ್ಲೇ ಚೊಚ್ಚಲ ಚಿನ್ನ ಗೆಲ್ಲಲು ಭಾರತದ ಶಟ್ಲರ್‌ಗಳು ಕಾತರದಿಂದಿದ್ದಾರೆ.

4 ಬಾಕ್ಸಿಂಗ್‌

2008, 2012 ಹಾಗೂ 2020ರಲ್ಲಿ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಪದಕ ಲಭಿಸಿದೆ. ಕಳೆದ ಬಾರಿ ಕಂಚು ಗೆದ್ದಿದ್ದ ಲವ್ಲೀನಾ ಈ ಬಾರಿಯೂ ಸ್ಪರ್ಧಿಸಲಿದ್ದಾರೆ. ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌, ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನ ಗೆದ್ದ ಅಮಿತ್‌ ಪಂಘಾಲ್‌ ಕೂಡಾ ಸ್ಪರ್ಧಿಸುತ್ತಿದ್ದು, ಪದಕ ನಿರೀಕ್ಷೆ ಹೆಚ್ಚಿದೆ.

5 ಶೂಟಿಂಗ್‌

ಭಾರತದ 21 ಮಂದಿ ಈ ಬಾರಿ ಶೂಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇದು ಸಾರ್ವಕಾಲಿಕ ಗರಿಷ್ಠ. ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಪದಕ ಸಿಗದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಶೂಟರ್‌ಗಳ ಗಮನಾರ್ಹ ಪ್ರದರ್ಶನ ನೋಡಿದರೆ ಈ ಸಲ ಪ್ಯಾರಿಸ್‌ನಲ್ಲಿ ಮೆಡಲ್‌ ಸಾಧನೆ ಮಾಡಬಹುದು.

5 ವರ್ಷಕ್ಕೆ ಮೆಗಾ ಹರಾಜು, ಆರು ಆಟಗಾರರು ರೀಟೈನ್‌; ಬಿಸಿಸಿಐ ಮುಂದೆ ಐಪಿಎಲ್‌ ಫ್ರಾಂಚೈಸಿ ಡಿಮ್ಯಾಂಡ್..!

6 ಕುಸ್ತಿ

ಕಳೆದ 4 ಒಲಿಂಪಿಕ್ಸ್‌ಗಳಲ್ಲೂ ಭಾರತಕ್ಕೆ ಪದಕ ಲಭಿಸಿದ ಏಕೈಕ ಕ್ರೀಡೆ ಕುಸ್ತಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಜರಂಗ್‌ ಹಾಗೂ ರವಿ ದಹಿಯಾ ಪದಕ ಗೆದ್ದಿದ್ದರು. ಇವರಿಬ್ಬರೂ ಈ ಸಲ ಆಡದಿದ್ದರೂ ಇತರ ತಾರಾ ಕುಸ್ತಿಪಟುಗಳು ಭಾರತಕ್ಕೆ ಪದಕ ನಿರೀಕ್ಷೆ ಮೂಡಿಸಿದ್ದಾರೆ.

7 ವೇಟ್‌ಲಿಫ್ಟಿಂಗ್‌

ಕಳೆದ ಬಾರಿ ಟೋಕಿಯೋದಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಲಭಿಸಿತ್ತು. ಗೆದ್ದವರು ಮೀರಾಬಾಯಿ ಚಾನು. ಈ ಸಲವೂ ಚಾನು ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಪದಕ ತಂದುಕೊಡುವ ಕಾತರದಲ್ಲಿದ್ದಾರೆ.

ಕರ್ನಾಟಕಕ್ಕೆ ಸಿಗುತ್ತಾ ಒಲಿಂಪಿಕ್ಸ್‌ ಪದಕ?

ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ಚೆನ್ನೈನ ಶ್ರೀರಾಮ್‌ ಬಾಲಾಜಿ ಜೊತೆಗೂಡಿ ಕಣಕ್ಕಿಳಿದಿದ್ದು, ಈಜು ಸ್ಪರ್ಧೆಯಲ್ಲಿ ಧಿನಿಧಿ ದೇಸಿಂಘು ಹಾಗೂ ಶ್ರೀಹರಿ ನಟರಾಜ್ ಸ್ಪರ್ಧಿಸುತ್ತಿದ್ದಾರೆ. ಬ್ಯಾಡ್ಮಿಂಟನ್‌ ತಾರೆ ಅಶ್ವಿನಿ ಪೊನ್ನಪ್ಪ, ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್‌.ಪೂವಮ್ಮ ಹಾಗೂ ಮಿಜೊ ಚಾಕೊ ಕುರಿಯನ್‌, ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಗಾಲ್ಫ್‌ನಲ್ಲಿ ಅದಿತಿ ಅಶೋಕ್‌ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಈ ಪೈಕಿ ಬೋಪಣ್ಣ ಹಾಗೂ ಅದಿತಿ ಅಶೋಕ್‌ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳು ಎನಿಸಿಕೊಂಡಿದ್ದು, ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ವೈಯಕ್ತಿಕ ಪದಕ ಬರ ನೀಗಿಸುವ ಕಾತರದಲ್ಲಿದ್ದಾರೆ.
 

Latest Videos
Follow Us:
Download App:
  • android
  • ios