Asianet Suvarna News Asianet Suvarna News

ಮರ್ರೆ ವಿದಾಯ: ಕಣ್ಣೀರಿಡುತ್ತಾ ನಿವೃತ್ತಿ ಪ್ರಕಟಿಸಿದ ಮಾಜಿ ನಂ.1 ಟೆನಿಸಿಗ

‘ನಾನು ಸೀಮಿತ ಚಲನವಲನಗಳೊಂದಿಗೆ ಆಡಲು ಸಾಧ್ಯ. ಆದರೆ ಸ್ಪರ್ಧೆ ನಡೆಸಲು ಇಲ್ಲವೇ ಕಠಿಣ ಅಭ್ಯಾಸ ನಡೆಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿವೃತ್ತಿ ಹೊರತುಪಡಿಸಿ ನನಗೆ ಬೇರೆ ಆಯ್ಕೆ ಕಾಣಿಸುತ್ತಿಲ್ಲ’ ಎಂದು ಮರ್ರೆ ಹೇಳಿದರು.

Tennis Star Andy Murray Announces Retirement
Author
Melbourne VIC, First Published Jan 12, 2019, 9:42 AM IST

ಮೆಲ್ಬರ್ನ್‌[ಜ.12]: ವಿಶ್ವದ ಮಾಜಿ ನಂ.1 ಟೆನಿಸಿಗ ಬ್ರಿಟನ್‌ನ ಆ್ಯಂಡಿ ಮರ್ರೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವಾರ ಆರಂಭಗೊಳ್ಳಲಿರುವ ಆಸ್ಪ್ರೇಲಿಯನ್‌ ಓಪನ್‌ ತಮ್ಮ ವೃತ್ತಿ ಬದುಕಿನ ಅಂತಿಮ ಪಂದ್ಯಾವಳಿಯಾಗಲಿದೆ ಎಂದು ಮರ್ರೆ ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಡುತ್ತಾ ಪ್ರಕಟಿಸಿದರು.

ಮಾಜಿ ವಿಶ್ವ ನಂ.1 ಹಾಗೂ 3 ಬಾರಿ ಗ್ರ್ಯಾಂಡ್‌ಸ್ಲಾಂ ವಿಜೇತ ಆಟಗಾರ ಮರ್ರೆ ತಾವು ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದು ಅಭ್ಯಾಸ ನಡೆಸಲು ಸಹ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ‘ನಾನು ಸೀಮಿತ ಚಲನವಲನಗಳೊಂದಿಗೆ ಆಡಲು ಸಾಧ್ಯ. ಆದರೆ ಸ್ಪರ್ಧೆ ನಡೆಸಲು ಇಲ್ಲವೇ ಕಠಿಣ ಅಭ್ಯಾಸ ನಡೆಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿವೃತ್ತಿ ಹೊರತುಪಡಿಸಿ ನನಗೆ ಬೇರೆ ಆಯ್ಕೆ ಕಾಣಿಸುತ್ತಿಲ್ಲ’ ಎಂದು ಮರ್ರೆ ಹೇಳಿದರು.

77 ವರ್ಷಗಳಲ್ಲಿ ವಿಂಬಲ್ಡನ್‌ ಗೆದ್ದ ಮೊದಲ ಬ್ರಿಟನ್‌ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮರ್ರೆಗೆ, ‘ಸರ್‌’ ಗೌರವ ಸಹ ನೀಡಲಾಗಿತ್ತು. ಈ ವರ್ಷ ವಿಂಬಲ್ಡನ್‌ನಲ್ಲಿ ಆಡಿ ಬಳಿಕ ನಿವೃತ್ತಿಯಾಗಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು. ‘ವಿಂಬಲ್ಡನ್‌ನಲ್ಲಿ ನನ್ನ ಆಟ ನಿಲ್ಲಿಸಬೇಕು ಎನ್ನುವ ಆಸೆಯಿದೆ. ಆದರೆ ಖಂಡಿತವಾಗಿಯೂ ನನ್ನಿಂದ ಅಷ್ಟು ಸಮಯ ಮುಂದುವರಿಯಲು ಸಾಧ್ಯವಿಲ್ಲ. ಬಹಳ ಸಮಯದಿಂದ ನೋವು ನನ್ನನ್ನು ಬಲವಾಗಿ ಕಾಡುತ್ತಿದೆ’ ಎಂದರು.

ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ಆಸ್ಪ್ರೇಲಿಯನ್‌ ಓಪನ್‌ ತಪ್ಪಿಸಿಕೊಂಡಿದ್ದ ಮರ್ರೆ, ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆದ ಕ್ವೀನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಶೆನ್ಜೆನ್‌ನಲ್ಲಿ ನಡೆದ ಟೂರ್ನಿ ಬಳಿಕ ಅವರು ಮತ್ತೆ ಕಾಣಿಸಿಕೊಳ್ಳಲಿಲ್ಲ.

ಈ ವರ್ಷ ಬ್ರಿಸ್ಬೇನ್‌ ಓಪನ್‌ನ 2ನೇ ಸುತ್ತಿನಲ್ಲೇ ಹೊರಬಿದ್ದ ಮರ್ರೆ, ಗುರುವಾರ ಇಲ್ಲಿ ನೋವಾಕ್‌ ಜೋಕೋವಿಚ್‌ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿದ ಬಳಿಕ ನಿವೃತ್ತಿ ವಿಚಾರ ಬಹಿರಂಗಗೊಳಿಸಿದರು. ಜ.14ರಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯನ್‌ ಓಪನ್‌ನ ಮೊದಲ ಸುತ್ತಿನಲ್ಲಿ 22ನೇ ಶ್ರೇಯಾಂಕಿತ ಸ್ಪೇನ್‌ನ ರಾಬೆರ್ಟೋ ಬಟಿಸ್ಟಾಅಗುಟ್‌ ವಿರುದ್ಧ ಸೆಣಸಲಿದ್ದಾರೆ.

ಬಿಗ್‌ 4ನ ಭಾಗವಾಗಿದ್ದ ಮರ್ರೆ!

ಆ್ಯಂಡಿ ಮರ್ರೆ ಈ ಪೀಳಿಗೆಯ ಪುರುಷರ ಸಿಂಗಲ್ಸ್‌ನ ‘ಬಿಗ್‌ 4’ನಲ್ಲಿ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ನೋವಾಕ್‌ ಜೋಕೋವಿಚ್‌ ಜತೆ ಸ್ಥಾನ ಪಡೆದಿದ್ದಾರೆ. ಕಳೆದ ಒಂದೂವರೆ ದಶಕದಲ್ಲಿ ಈ ನಾಲ್ವರು ಟೆನಿಸ್‌ ಜಗತ್ತನ್ನು ಆಳಿದ್ದಾರೆ. ಆದರೆ ಸದ್ಯ ಮರ್ರೆ ರ‍್ಯಾಂಕಿಂಗ್‌ 230ಕ್ಕೆ ಕುಸಿದಿದೆ. 2016ರಲ್ಲಿ 2ನೇ ಬಾರಿಗೆ ವಿಂಬಲ್ಡನ್‌ ಜಯಿಸಿದ ಬಳಿಕ ಮರ್ರೆ ಗ್ರ್ಯಾಂಡ್‌ಸ್ಲಾಂ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದಾರೆ. 2005ರಲ್ಲಿ ವೃತ್ತಿ ಬದುಕು ಆರಂಭಿಸಿದ ಮರ್ರೆ ಕೇವಲ 3 ಗ್ರ್ಯಾಂಡ್‌ಸ್ಲಾಂ ಜಯಿಸಿದರೂ 2 ಒಲಿಂಪಿಕ್‌ ಚಿನ್ನದ ಪದಕ ಹಾಗೂ 45 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ರಾಫೆಲ್‌ ನಡಾಲ್‌ ಸೇರಿದಂತೆ ಇನ್ನೂ ಅನೇಕ ದಿಗ್ಗಜ ಟೆನಿಸಿಗರು ಮರ್ರೆ ನಿವೃತ್ತಿ ಘೋಷಣೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರ ಮುಂದಿನ ಬದುಕಿಗೆ ಶುಭ ಕೋರಿದ್ದಾರೆ.

ಆ್ಯಂಡಿ ಮರ್ರೆ ಸಾಧನೆ

3 ಗ್ರ್ಯಾಂಡ್‌ಸ್ಲಾಂ (2 ವಿಂಬಲ್ಡನ್‌, 1 ಯುಎಸ್‌ ಓಪನ್‌)

2 ಒಲಿಂಪಿಕ್ಸ್‌ ಚಿನ್ನ (ಪುರುಷರ ಸಿಂಗಲ್ಸ್‌: 2012, 2016)

45 ಎಟಿಪಿ ಪ್ರಶಸ್ತಿ (14ನೇ ಗರಿಷ್ಠ)

41 ವಾರಗಳ ಕಾಲ ವಿಶ್ವ ನಂ.1

ವಿಂಬಲ್ಡನ್‌ನಲ್ಲಿ ಆಡಿ ಟೆನಿಸ್‌ಗೆ ವಿದಾಯ ಘೋಷಿಸಬೇಕು ಎನ್ನುವುದು ನನ್ನ ಇಚ್ಛೆ. ಆದರೆ ಇನ್ನೂ 4-5 ತಿಂಗಳು ಕಾಲ ನೋವಿನೊಂದಿಗೆ ಆಡಲು ಸಾಧ್ಯವಿಲ್ಲ. ಸರಿಯಾಗಿ ಅಭ್ಯಾಸ ನಡೆಸಲು ಸಹ ನನಗೆ ಸಾಧ್ಯವಾಗುತ್ತಿಲ್ಲ.

- ಆ್ಯಂಡಿ ಮರ್ರೆ, ಮಾಜಿ ವಿಶ್ವ ನಂ.1 ಟೆನಿಸಿಗ

Follow Us:
Download App:
  • android
  • ios