Serena Williams: ಯುಎಸ್ ಓಪನ್ ಮೂರನೇ ಸುತ್ತಿನಲ್ಲೇ ಸೆರೆನಾ ಔಟ್, ಟೆನಿಸ್ ಬದುಕಿಗೆ ವಿದಾಯ..!
ಟೆನಿಸ್ ವೃತ್ತಿ ಬದುಕಿನ ಕೊನೆಯ ಪಂದ್ಯವನ್ನಾಡಿದ ಸೆರೆನಾ ವಿಲಿಯಮ್ಸ್
27 ವರ್ಷಗಳ ಸುದೀರ್ಘ ಟೆನಿಸ್ ವೃತ್ತಿ ಬದುಕಿಗೆ ತೆರೆ ಎಳೆದ ಟೆನಿಸ್ ದಂತಕಥೆ
ಮಹಿಳಾ ಸಿಂಗಲ್ಸ್‌ನಲ್ಲಿ 23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಸೆರೆನಾ ವಿಲಿಯಮ್ಸ್
ನ್ಯೂಯಾರ್ಕ್(ಸೆ.03): ಮಹಿಳಾ ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಅವರ ವರ್ಣರಂಜಿತ ಟೆನಿಸ್ ವೃತ್ತಿಬದುಕು, ಯುಎಸ್ ಓಪನ್ ಸೋಲಿನೊಂದಿಗೆ ಅಂತ್ಯವಾಗಿದೆ. 40 ವರ್ಷದ ಸೆರೆನಾ ವಿಲಿಯಮ್ಸ್, ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲ್‌ಜಾನೊವಿಕ್ ಎದುರು 7-5, 6-7(4/7), 6-1 ನೇರ ಸೆಟ್‌ಗಳಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ತಿಂಗಳಷ್ಟೇ ಸೆರೆನಾ ವಿಲಿಯಮ್ಸ್ ತಾವು ಯುಎಸ್ ಓಪನ್ ಟೆನಿಸ್ ಟೂರ್ನಿ ಬಳಿಕ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು.
ಸೆರೆನಾ ವಿಲಿಯಮ್ಸ್, ತಮ್ಮ 27 ವರ್ಷಗಳ ಸುದೀರ್ಘ ಟೆನಿಸ್ ವೃತ್ತಿಜೀವನದಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಒಟ್ಟು 23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸುವ ಮೂಲಕ ಅಕ್ಷರಶಃ ಎರಡೂವರೆ ದಶಕಗಳ ಕಾಲ ಟೆನಿಸ್ ಜಗತ್ತನ್ನು ಆಳಿದ್ದರು. ತವರಿನಂಗಳಲ್ಲಿ ಮತ್ತೊಮ್ಮೆ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರೀಕ್ಷೆಯಲ್ಲಿದ್ದ ಸೆರೆನಾಗೆ ಆಸ್ಟ್ರೇಲಿಯಾದ ಆಟಗಾರ್ತಿ ಶಾಕ್ ನೀಡಿದ್ದಾರೆ. ಬರೋಬ್ಬರಿ 3 ಗಂಟೆ 5 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಕೊನೆಗೂ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲ್‌ಜಾನೊವಿಕ್ ಅವರ ಕೈ ಮೇಲಾಗಿದೆ.
ಇದೇ ಸೆಪ್ಟೆಂಬರ್ 26ರಂದು 41ನೇ ವಯಸ್ಸಿಗೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್, ಆರ್ಥರ್ ಆಶೆ ಬಳಿಕ ಮಹಿಳಾ ಸಿಂಗಲ್ಸ್‌ನಲ್ಲಿ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಕಪ್ಪುವರ್ಣೀಯ ಆಟಗಾರ್ತಿ ಎನಿಸಿದ್ದರು. ಸೆರೆನಾ ತಮ್ಮ 17ನೇ ವಯಸ್ಸಿನಲ್ಲಿಯೇ ಚೊಚ್ಚಲ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಯುಎಸ್ ಓಪನ್ ಬಳಿಕ ಟೆನಿಸ್‌ಗೆ ಸೆರೆನಾ ವಿಲಿಯಮ್ಸ್ ಗುಡ್‌ಬೈ!
ಟೆನಿಸ್ ದಂತಕಥೆ ಸೆರೆನಾ ತಾಯಿಯಾದ ಬಳಿಕ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸುವುದರೊಂದಿಗೆ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಲು ಎದುರು ನೋಡುತ್ತಿದ್ದರು. 2017ರಲ್ಲಿ ಸೆರೆನಾ ವಿಲಿಯಮ್ಸ್ ಕೊನೆಯ ಬಾರಿಗೆ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದರು. ಇದಾದ ಬಳಿಕ ಗಾಯದ ಸಮಸ್ಯೆ ಹಾಗೂ ವೃಯುಕ್ತಿಕ ಕಾರಣಗಳಿಂದ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಲು ಸೆರೆನಾ ವಿಲಿಯಮ್ಸ್‌ಗೆ ಸಾಧ್ಯವಾಗಲಿಲ್ಲ.
ಸೆರೆನಾ ವಿಲಿಯಮ್ಸ್, ಆಸ್ಟ್ರೇಲಿಯನ್ ಓಪನ್‌ನಲ್ಲಿ 92 ಗೆಲುವು, ಫ್ರೆಂಚ್ ಓಪನ್‌ನಲ್ಲಿ 69 ಗೆಲುವು, ವಿಂಬಲ್ಡನ್‌ನಲ್ಲಿ 98 ಗೆಲುವು ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ 108 ಗೆಲುವುಗಳನ್ನು ದಾಖಲಿಸಿದ್ದಾರೆ.
ಇನ್ನು ಆಸ್ಟ್ರೇಲಿನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ಮುಗ್ಗರಿಸಿದ ಬಳಿಕ ಸಂದರ್ಶಕರು ನಿವೃತ್ತಿಯನ್ನು ಕೆಲಕಾಲ ಮುಂದೂಡುವ ಸಾಧ್ಯತೆಯಿದೆಯೇ ಎಂದು ಸೆರೆನಾ ವಿಲಿಯಮ್ಸ್ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಸೆರೆನಾ, ಹಾಗಾಗುತ್ತದೆ ಎಂದು ನನಗನಿಸುತ್ತಿಲ್ಲ, ಆದರೆ ಏನು ಬೇಕಾದರೂ ಆಗಬಹುದು ಎಂದು ಚುಟುಕು ಉತ್ತರ ನೀಡುವ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.
ನನ್ನ ಟೆನಿಸ್ ವೃತ್ತಿಜೀವನದಲ್ಲಿ 'Go, Serena,' ಎಂದು ಹುರಿದುಂಬಿಸಿದ ಪ್ರತಿಯೊಬ್ಬ ಅಭಿಮಾನಿಗೂ ನಾನು ಚಿರಋಣಿಯಾಗಿದ್ದೇನೆ. ನಿಮ್ಮೆಲ್ಲರ ಮುಂದೆ ನಾನು ಆಡುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಪೋಷಕರ ಪರಿಶ್ರಮ ಹಾಗೂ ಬೆಂಬಲದಿಂದ. ಅವರು ನನ್ನೆಲ್ಲ ಯಶಸ್ಸಿನ ನಿಜವಾದ ಸೂತ್ರದಾರಿಗಳು. ಅವರಿಗೂ ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಎಂದು ಸೆರೆನಾ ಹೇಳಿದ್ದಾರೆ.
ಇದೇ ವೇಳೆ ಸೆರೆನಾ ವಿಲಿಯಮ್ಸ್ ತಮ್ಮ ಸಹೋದರಿಯ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ. ಒಂದು ವೇಳೆ ವೀನಸ್ ಇಲ್ಲದೇ ಹೋಗಿದ್ದರೇ ಸೆರೆನಾ ಇರುತ್ತಿರಲಿಲ್ಲ. ಹೀಗಾಗಿ ವೀನಸ್‌ಗೆ ಧನ್ಯವಾದಗಳು. ವೀನಸ್ ವಿಲಿಯಮ್ಸ್ ಇದ್ದಿದ್ದರಿಂದಲೇ ಸೆರೆನಾ ವಿಲಿಯಮ್ಸ್ ನಿಮ್ಮೆಲ್ಲರ ಮುಂದೆ ಬೆಳೆದು ನಿಂತಿದ್ದೇನೆ ಎಂದು ಸೆರೆನಾ ಹೇಳಿದ್ದಾರೆ.