ಯುಎಸ್ ಓಪನ್ ಬಳಿಕ ಟೆನಿಸ್ಗೆ ಸೆರೆನಾ ವಿಲಿಯಮ್ಸ್ ಗುಡ್ಬೈ!
ಟೆನಿಸ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್
ಮಹಿಳಾ ಸಿಂಗಲ್ಸ್‌ನಲ್ಲಿ 23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಸೆರೆನಾ
2017ರಲ್ಲಿ ಕೊನೆಯ ಬಾರಿಗೆ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದ ಸೆರೆನಾ
ನ್ಯೂಯಾರ್ಕ್(ಆ.10): ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ್ತಿಯರ ಪೈಕಿ ಒಬ್ಬರೆನಿಸಿರುವ, 23 ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಈ ವರ್ಷ ಯುಎಸ್ ಓಪನ್ ಟೂರ್ನಿಯ ಬಳಿಕ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಆರ್ಥರ್ ಆಶೆ ಬಳಿಕ ಮಹಿಳಾ ಸಿಂಗಲ್ಸ್‌ನಲ್ಲಿ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಕಪ್ಪುವರ್ಣೀಯ ಆಟಗಾರ್ತಿ ಎನಿಸಿದ್ದ ಸೆರೆನಾ ವಿಲಿಯಮ್ಸ್, ದಶಕಗಳ ಕಾಲ ಅಕ್ಷರಶಃ ಟೆನಿಸ್ ಜಗತ್ತನ್ನು ಆಳಿದ್ದರು. ತಮ್ಮ 17ನೇ ವಯಸ್ಸಿನಲ್ಲಿಯೇ ಸೆರೆನಾ ವಿಲಿಯಮ್ಸ್ ಚೊಚ್ಚಲ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರತಿಷ್ಠಿತ ವೋಗ್ ಪುರುವಣಿಯಲ್ಲಿ ಬರೆದಿರುವ ಅಂಕಣದಲ್ಲಿ ಸೆರೆನಾ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಿವೃತ್ತಿ ಎನ್ನುವ ಪದವನ್ನು ಬಳಸಲು ಇಚ್ಛಿಸದ ಸೆರೆನಾ, ‘ಸದ್ಯದಲ್ಲೇ ನಾನು 41 ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ಆಟದಿಂದ ದೂರವಾಗುತ್ತಿದ್ದೇನೆ ಎನ್ನುವುದಕ್ಕಿಂತ ಟೆನಿಸ್‌ನಿಂದ ವಿಕಸನಗೊಳ್ಳುತ್ತಿದ್ದು, ಆಟಕ್ಕಿಂತ ಹೆಚ್ಚು ಮಹತ್ವ ಪಡೆದಿರುವ ವಿಷಯಗಳತ್ತ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದಿದ್ದಾರೆ. ಮತ್ತೊಂದು ಮಗು ಪಡೆಯುವುದು ಮತ್ತು ತಮ್ಮ ವ್ಯವಹಾರದತ್ತ ಹೆಚ್ಚಿನ ಗಮನ ಹರಿಸುವುದು ಸೆರೆನಾರ ಉದ್ದೇಶ ಎಂದು ತಿಳಿದುಬಂದಿದೆ.
ಇದೇ ತಿಂಗಳು 29(ಆ.29)ರಿಂದ ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿ ಆರಂಭಗೊಳ್ಳಲಿದ್ದು, ಸೆರೆನಾ ತಾಯಿಯಾದ ಬಳಿಕ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸುವುದರೊಂದಿಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ. 2017ರಲ್ಲಿ ಸೆರೆನಾ ವಿಲಿಯಮ್ಸ್ ಕೊನೆ ಬಾರಿಗೆ ಗ್ರ್ಯಾನ್ ಸ್ಲಾಂ ಜಯಿಸಿದ್ದರು.
ಸೆರೆನಾ ವಿಲಿಯಮ್ಸ್ 22 ವರ್ಷಗಳ ವರ್ಣರಂಜಿತ ಟೆನಿಸ್ ವೃತ್ತಿಜೀವನದಲ್ಲಿ ಅಕ್ಷರಶಃ ಪ್ರಾಬಲ್ಯವನ್ನು ಮೆರೆದಿದ್ದಾರೆ. ಸೆರೆನಾ ವಿಲಿಯಮ್ಸ್ ಮಹಿಳಾ ಸಿಂಗಲ್ಸ್‌ನಲ್ಲಿ ಇದುವರೆಗೂ 73 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇನ್ನು ಡಬಲ್ಸ್‌ನಲ್ಲಿ 23 ಪ್ರಶಸ್ತಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಸೆರೆನಾ ವಿಲಿಯಮ್ಸ್ ಜಯಿಸಿದ 39 ಟೆನಿಸ್ ಗ್ರ್ಯಾನ್ ಸ್ಲಾಂಗಳ ಪೈಕಿ ಮಹಿಳಾ ಸಿಂಗಲ್ಸ್‌ನಲ್ಲಿ 23, ಮಹಿಳಾ ಡಬಲ್ಸ್‌ನಲ್ಲಿ 14 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 2 ಗ್ರ್ಯಾನ್‌ಸ್ಲಾಂಗಳು ಸೇರಿವೆ. ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಒಂದು ಟೆನಿಸ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದರೇ, ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್(24) ಹೆಸರಿನಲ್ಲಿರುವ ಸಾರ್ವಕಾಲಿಕ ಗರಿಷ್ಠ ಸಿಂಗಲ್ಸ್ ಗ್ರ್ಯಾನ್‌ಸ್ಲಾಂ ದಾಖಲೆ ಸರಿಗಟ್ಟಲಿದ್ದಾರೆ.
Commonwealth Games 2022 ಸಾಧಕರಿಗೆ ಅದ್ಧೂರಿ ಸ್ವಾಗತ
ಒಲಿಂಪಿಕ್ಸ್‌ನಲ್ಲಿ ಅಮೆರಿಕ ಪರ 4 ಬಾರಿ ಚಿನ್ನದ ಪದಕ ಜಯಿಸಿರುವ ಸೆರೆನಾ ವಿಲಿಯಮ್ಸ್, ಟೆನಿಸ್ ವೃತ್ತಿಜೀವನದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ರೂಪದಲ್ಲಿ 94.5 ಮಿಲಿಯನ್ ಡಾಲರ್ ಸಂಪತ್ತು ಗಳಿಸಿದ್ದಾರೆ. ಈ ಮೂಲಕ ಕ್ರೀಡೆಯಲ್ಲಿ ಅತಿಹೆಚ್ಚು ಸಂಪಾದನೆ ಮಾಡಿದ ಜಗತ್ತಿನ ಏಕೈಕ ಮಹಿಳಾ ಅಥ್ಲೀಟ್ ಎನ್ನುವ ಹಿರಿಮೆ ಕೂಡಾ ಸೆರೆನಾ ಹೆಸರಿನಲ್ಲಿದೆ. 2017ರಲ್ಲಿ ಕೊನೆಯ ಬಾರಿಗೆ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ್ದ ಸೆರೆನಾ, ಇದಾದ ಬಳಿಕ ಟೆನಿಸ್ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕಲು ಸಾಧ್ಯವಾಗಿಲ್ಲ.