ವಿಂಡೀಸ್ ಫೈಟ್: ಟೀಂ ಇಂಡಿಯಾದಲ್ಲಿ ಯಾರಿಗೆ ಚಾನ್ಸ್..? ಮತ್ಯಾರಿಗೆ ರೆಸ್ಟ್..?
ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಮತ್ತೆ ಏಕದಿನ ಮಾದರಿಯಲ್ಲಿಂದ ವಿಂಡೀಸ್ ಎದುರು ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಂಭಾವ್ಯ ಆಟಗಾರರು ಯಾರು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಹೇಗಿರಬೇಕು ನೀವೂ ಕಮೆಂಟ್ ಮಾಡಿ...
ಗಯಾನ[ಆ.08]: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕೆರಿಬಿಯನ್ ನೆಲದಲ್ಲಿ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗುತ್ತಿರುವ ಭಾರತ, ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನದ ಕನವರಿಕೆಯಲ್ಲಿದೆ.
ಕೊಹ್ಲಿ- ರೋಹಿತ್ ಇಬ್ಬರಲ್ಲಿ ಯಾರು ಕ್ಲಿಕ್ ಆಗ್ತಾರೋ ಅವರೇ ನಂ.1
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಭಂಗ ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಒನ್ ಡೇ ಪಂದ್ಯ ಆಡಲು ಸಜ್ಜಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು ರೋಹಿತ್ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಆದ್ದರಿಂದ ಕೆ.ಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಧೋನಿ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಇಲ್ಲವೇ ಮನೀಶ್ ಪಾಂಡೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಭಾರತ-ವಿಂಡೀಸ್ ನಡುವೆ ಇಂದು ಒನ್ ಡೇ ಫೈಟ್
ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್’ಗೆ ವಿಶ್ರಾಂತಿ ನೀಡಿ, ಮತ್ತೋರ್ವ ವೇಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಇವರಿಗೆ ಸೈನಿ ಹಾಗೂ ಖಲೀಲ್ ಅಹಮ್ಮದ್ ಸಾಥ್ ನೀಡಲಿದ್ದಾರೆ. ಇಂದು ಬಹುತೇಕ ಸೈನಿ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಜಡೇಜಾ, ಕುಲ್ದೀಪ್ ಹಾಗೂ ಚಹಲ್ ಈ ಮೂವರ ಪೈಕಿ ಇಬ್ಬರಿಗೆ ಸ್ಥಾನ ಸಿಗಲಿದೆ. ಇನ್ನು ಮತ್ತೋರ್ವ ಆಲ್ರೌಂಡರ್ ಕೇದಾರ್ ಜಾಧವ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಸದ್ಯದ ಕುತೂಹಲ.
ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಆಯ್ಕೆ ಮಾಡಿದ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗ ಹೀಗಿದೆ ನೋಡಿ..
ಭಾರತ ತಂಡ:
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಖಲೀಲ್ ಅಹಮ್ಮದ್, ನವದೀಪ್ ಸೈನಿ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ