ನಂ.1 ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಭಾರತ ತಂಡವು ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದೆ. ಅದರೆ ಒಂದು ಟೆಸ್ಟ್ ಸರಣಿ ಸೋತರೆ ವಿರಾಟ್ ಪಡೆ ನಂ.1 ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು(ಸೆ.30): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಹು ನಿರೀಕ್ಷಿತ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೇವಲ 2 ದಿನ ಬಾಕಿ ಇದೆ. ಅ.2ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಸರಣಿ ಹಲವು ವಿಚಾರಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ, ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿ, ಮತ್ತೆ 120 ಅಂಕ ಗಳಿಸುವುದರ ಜತೆಗೆ ವಿಶ್ವ ನಂ.1 ಪಟ್ಟಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಒಂದೊಮ್ಮೆ ಭಾರತ ಸರಣಿಯಲ್ಲಿ ಸೋಲುಂಡರೆ, ಅಗ್ರಸ್ಥಾನದಿಂದ ಕೆಳಗಿಳಿಯಲಿದೆ.
ಅಂಡರ್-18 ಸ್ಯಾಫ್ ಕಪ್ ಫುಟ್ಬಾಲ್ ಭಾರತಕ್ಕೆ ಚೊಚ್ಚಲ ಪ್ರಶಸ್ತಿ!
ದ.ಆಫ್ರಿಕಾಕ್ಕೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಇದು ಮೊದಲ ಸರಣಿ. ತಂಡ ಅನುಭವಿ ಆಟಗಾರರೊಂದಿಗೆ ಭಾರತಕ್ಕೆ ಆಗಮಿಸಿದೆ. ವಿಶ್ವ ನಂ.1 ಟೀಂ ಇಂಡಿಯಾ ಹಾಗೂ ವಿಶ್ವ ನಂ.3 ದಕ್ಷಿಣ ಆಫ್ರಿಕಾ ನಡುವಿನ ಸರಣಿ ರ‍್ಯಾಂಕಿಂಗ್ ಪೈಪೋಟಿಯಿಂದಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಭಾರತ 114 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 109 ಅಂಕ ಪಡೆದಿರುವ ದ.ಆಫ್ರಿಕಾ 3ನೇ ಸ್ಥಾನದಲ್ಲಿದೆ. ಸರಣಿಯಲ್ಲಿ ಭಾರತ 0-1ರಿಂದ ಸೋತರೂ, ದ.ಆಫ್ರಿಕಾ 3 ರೇಟಿಂಗ್ ಅಂಕ ಗಳಿಸಲಿದ್ದು, 112 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಭಾರತ 2 ಅಂಕಗಳನ್ನು ಕಳೆದುಕೊಳ್ಳಲಿದ್ದು, 2ನೇ ಸ್ಥಾನಕ್ಕೆ ಕುಸಿಯಲಿದೆ. ದಕ್ಷಿಣ ಆಫ್ರಿಕಾ 2-0ಯಲ್ಲಿ ಗೆದ್ದರೆ ತಂಡದ ರೇಟಿಂಗ್ ಅಂಕ 114ಕ್ಕೇರಲಿದೆ. ಭಾರತ 110 ಅಂಕಗಳಿಗೆ ಕುಸಿಯಲಿದೆ. ದಕ್ಷಿಣ ಆಫ್ರಿಕಾ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದರೆ 115 ಅಂಕ ಗಳಿಸಲಿದ್ದು, ಭಾರತ 109 ಅಂಕಗಳಿಗೆ ಕುಸಿಯಲಿದೆ.
ರಿಷಬ್ ಪಂತ್ ಬದಲು ಹೊಸ ವಿಕೆಟ್ ಕೀಪರ್ ಸೂಚಿಸಿದ ಫ್ಯಾನ್ಸ್!
ಭಾರತ ಸರಣಿ ಗೆದ್ದರೆ?: ಭಾರತ 1-0 ಅಂತರದಲ್ಲಿ ಗೆದ್ದರೆ 3 ಅಂಕ ಗಳಿಸಲಿದೆ, 2-0ಯಲ್ಲಿ ಗೆದ್ದರೆ 4 ಅಂಕ, 3-0 ಅಂತರದಲ್ಲಿ ಸರಣಿ ಗೆದ್ದರೆ ಒಟ್ಟು 5 ಅಂಕ ಕಲೆಹಾಕಲಿದ್ದು, 119 ಅಂಕಗಳಿಗೆ ಏರಿಕೆ ಕಾಣಲಿದೆ. ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದರೆ ದಕ್ಷಿಣ ಆಫ್ರಿಕಾ 4ನೇ ಸ್ಥಾನಕ್ಕೆ ಕುಸಿಯಲಿದೆ. ಒಂದೊಮ್ಮೆ 3 ಪಂದ್ಯಗಳ ಸರಣಿ 1-1ರಲ್ಲಿ ಡ್ರಾಗೊಂಡರೆ ಭಾರತ 114 ಅಂಕಗಳನ್ನು ಕಾಯ್ದುಕೊಳ್ಳಲಿದ್ದು, ಅಗ್ರಸ್ಥಾನದಲ್ಲೇ ಉಳಿದುಕೊಳ್ಳಲಿದೆ. ದ.ಆಫ್ರಿಕಾ ಸಹ 3ನೇ ಸ್ಥಾನದಲ್ಲೇ ಮುಂದುವರಿಯಲಿದೆ.
ಅ.2ರಿಂದ ವಿಶಾಖಪಟ್ಟಂನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಅ.10ರಿಂದ ಪುಣೆಯಲ್ಲಿ 2ನೇ ಟೆಸ್ಟ್, ಅ.19ರಿಂದ ರಾಂಚಿಯಲ್ಲಿ 3ನೇ ಟೆಸ್ಟ್ ನಡೆಯಲಿದೆ.
ಮತ್ತೆ ಅಗ್ರಸ್ಥಾನ ಗಳಿಸುತ್ತಾರಾ ಕೊಹ್ಲಿ?
ಆ್ಯಷಸ್ ಸರಣಿಯಲ್ಲಿ ಪ್ರಚಂಡ ಆಟವಾಡಿದ ಸ್ಟೀವ್ ಸ್ಮಿತ್‌ಗೆ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದ ವಿರಾಟ್ ಕೊಹ್ಲಿಗೆ ಮತ್ತೆ ನಂ.1 ಪಟ್ಟ ಪಡೆಯಲು ಅವಕಾಶವಿದೆ. ದ.ಆಫ್ರಿಕಾ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಉತ್ಕೃಷ್ಟ ಪ್ರದರ್ಶನ ತೋರಿದರೆ ಸ್ಮಿತ್‌ರನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನ ಪಡೆಯಬಹುದಾಗಿದೆ. ಸ್ಮಿತ್ 937 ರೇಟಿಂಗ್ ಅಂಕ ಹೊಂದಿದ್ದು, ಕೊಹ್ಲಿ 903 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.