ರಾಂಚಿ(ಮಾ.08): ಭಾರತ-ಆಸ್ಪ್ರೇಲಿಯಾ ನಡುವಿನ ಬಹುಮಹತ್ವದ ಏಕದಿನ ಸರಣಿ, ಎಂ.ಎಸ್‌.ಧೋನಿಯ ತವರು ರಾಂಚಿಗೆ ಕಾಲಿಟ್ಟಿದೆ. ಹೈದರಾಬಾದ್‌ ಹಾಗೂ ನಾಗ್ಪುರ ಬಳಿಕ ತನ್ನ ಮಾಜಿ ನಾಯಕನ ಕೋಟೆಯಲ್ಲೂ ಭಾರತ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದು, ಶುಕ್ರವಾರ ನಡೆಯಲಿರುವ 3ನೇ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಕಣಕ್ಕಿಳಿಯಲಿದೆ. 2-0 ಮುನ್ನಡೆಯಲ್ಲಿರುವ ವಿರಾಟ್‌ ಕೊಹ್ಲಿ ಪಡೆ, ಮುನ್ನಡೆಯನ್ನು 3-0ಗೇರಿಸಿಕೊಂಡು 2 ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ಮೊದಲೆರಡು ಸರಣಿಗಳಲ್ಲಿ ಭಾರತಕ್ಕೆ ಸವಾಲು ಎಸೆದರೂ, ಪಂದ್ಯಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಎಡವಿತ್ತು. ಹೈದರಾಬಾದ್‌ನಲ್ಲಿ 237 ರನ್‌ ಗುರಿ ಬೆನ್ನತ್ತಿದ್ದ ಭಾರತವನ್ನು 99/4ಕ್ಕೆ ನಿಯಂತ್ರಿಸಿದ್ದ ಕಾಂಗರೂ ಪಡೆಗೆ, ಎಂ.ಎಸ್‌.ಧೋನಿ ಹಾಗೂ ಕೇದಾರ್‌ ಜಾಧವ್‌ರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಬಳಿಕ ನಾಗ್ಪುರದಲ್ಲಿ 251 ರನ್‌ ಗುರಿ ಬೆನ್ನತ್ತಿದ್ದ ಆಸೀಸ್‌ ಪಡೆ ಜಸ್ಪ್ರೀತ್‌ ಬುಮ್ರಾ ಮಾರಕ ದಾಳಿ ಹಾಗೂ ವಿಜಯ್‌ ಶಂಕರ್‌ರ ಜಾದೂಗೆ ತತ್ತರಿಸಿ ಕೊನೆ ಓವರ್‌ನಲ್ಲಿ ಮುಗ್ಗರಿಸಿತ್ತು.

ಇಂಡೋ-ಆಸಿಸ್ 3ನೇ ಏಕದಿನ: ಸಂಭವನೀಯ ಟೀಂ ಇಂಡಿಯಾ ಪ್ರಕಟ!

ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿರುವ ಭಾರತಕ್ಕೆ ಇನ್ನೂ ಒಂದೆರಡು ಸಮಸ್ಯೆಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಕಳೆದ 15 ಏಕದಿನದಲ್ಲಿ ಆರಂಭಿಕ ಶಿಖರ್‌ ಧವನ್‌ ಕೇವಲ 2 ಅರ್ಧಶತಕ ಬಾರಿಸಿದ್ದು, ಅವರ ಲಯದ ಸಮಸ್ಯೆ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಧವನ್‌ ವೈಫಲ್ಯ ಕಂಡಿದ್ದರೂ, ಗೆಲುವಿನ ಸಂಯೋಜನೆಯನ್ನು ಬದಲಿಸಲು ಭಾರತ ತಂಡದ ಆಡಳಿತ ನಿರ್ಧರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಕೆ.ಎಲ್‌.ರಾಹುಲ್‌ ಅವಕಾಶಕ್ಕಾಗಿ ಕನಿಷ್ಠ ಇನ್ನೂ ಒಂದು ಪಂದ್ಯ ಕಾಯಬೇಕಾಗಬಹುದು. ಇನ್ನು ನ್ಯೂಜಿಲೆಂಡ್‌ ವಿರುದ್ಧ ಪಂದ್ಯವೊಂದರಲ್ಲಿ 90 ರನ್‌ ಗಳಿಸಿ ತಂಡಕ್ಕೆ ನೆರವಾಗಿದ್ದನ್ನು ಹೊರತುಪಡಿಸಿದರೆ ಅಂಬಟಿ ರಾಯುಡು ಸಾಧನೆ ಶೂನ್ಯ. ಅತ್ಯಂತ ನಿರ್ಣಾಯಕ ಎನಿಸಿರುವ 4ನೇ ಕ್ರಮಾಂಕದಲ್ಲಿ ಆಡುತ್ತಾ ರಾಯುಡು ತಂಡಕ್ಕೆ ಹೊರೆಯಾಗಿದ್ದಾರೆ. ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡುತ್ತಿರುವ ರಾಯುಡು, ಉಳಿದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಲು ಕಾರಣರಾಗಿದ್ದಾರೆ. ವಿಶ್ವಕಪ್‌ಗೂ ಮುನ್ನ ಇನ್ನು ಕೇವಲ 3 ಪಂದ್ಯ ಮಾತ್ರ ಉಳಿದಿರುವ ಕಾರಣ, ರಾಯುಡು ಬದಲಿಗೆ ರಾಹುಲ್‌ಗೆ ಅವಕಾಶ ಕೊಟ್ಟು ನೋಡಲು ತಂಡ ನಿರ್ಧರಿಸಿದರೆ ಅವರು 3ನೇ ಕ್ರಮಾಂಕದಲ್ಲಿ ಆಡಬಹುದಾಗಿದೆ. 4ನೇ ಕ್ರಮಾಂಕದಲ್ಲಿ ಆಡಲು ಸಮಸ್ಯೆಯಿಲ್ಲ ಎಂದು ನಾಯಕ ಕೊಹ್ಲಿ ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಹೀಗಾದಲ್ಲಿ ತಂಡದ ಬ್ಯಾಟಿಂಗ್‌ ಬಲವೂ ಹೆಚ್ಚಲಿದೆ.

ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿರಬೇಕು: ಗಂಗೂಲಿ!

ಇನ್ನುಳಿದಂತೆ, ವಿಶ್ರಾಂತಿಯಲ್ಲಿದ ವೇಗಿ ಭುವನೇಶ್ವರ್‌ ಕುಮಾರ್‌ ತಂಡಕ್ಕೆ ವಾಪಸಾಗಿದ್ದು ಕಣಕ್ಕಿಳಿಯಲು ಕಾತರಿಸುತ್ತಿದ್ದಾರೆ. ಮೊಹಮದ್‌ ಶಮಿ ಇಲ್ಲವೇ ಜಸ್ಪ್ರೀತ್‌ ಬುಮ್ರಾಗೆ ವಿಶ್ರಾಂತಿ ಕೊಟ್ಟು ಭುವನೇಶ್ವರ್‌ ಆಡಿಸುವ ಸಾಧ್ಯತೆ ಇದೆ.

ಆಸೀಸ್‌ ಪಾಳಯದಲ್ಲಿ ಗೊಂದಲ: ವಿಶ್ವಕಪ್‌ ಹತ್ತಿರವಾದರೂ ಆಸ್ಪ್ರೇಲಿಯಾ ತಂಡದಲ್ಲಿ ಸಮಸ್ಯೆಗಳು ಮಾತ್ರ ಹೆಚ್ಚುತ್ತಿವೆ. ನಾಯಕ ಆ್ಯರೋನ್‌ ಫಿಂಚ್‌ ಲಯಕ್ಕೆ ಮರಳಿರುವುದು ಆಸ್ಪ್ರೇಲಿಯಾ ಪಾಳಯದಲ್ಲಿ ಭರವಸೆ ಹೆಚ್ಚಿಸಿದ್ದರೂ, ಮಧ್ಯ ಓವರ್‌ಗಳಲ್ಲಿ ನಿರಂತರವಾಗಿ ಸ್ಟ್ರೈಕ್‌ ಬದಲಿಸುವ ಆಟಗಾರರ ಅವಶ್ಯಕತೆ ಇದೆ. ಶಾನ್‌ ಮಾರ್ಷ್ ಇದಕ್ಕೆ ಸೂಕ್ತ ಎನಿಸಿದ್ದು, ಪೀಟರ್‌ ಹ್ಯಾಂಡ್ಸ್‌ಕಂಬ್‌ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸ್ಥಿರ ಪ್ರದರ್ಶನ ತೋರುವ ಆಟಗಾರರ ಕೊರತೆ ಕಾಂಗರೂಗಳನ್ನು ಕಾಡುತ್ತಿದೆ. ಜತೆಗೆ ಪ್ರಮುಖ ಬೌಲರ್‌ಗಳ ಅನುಪಸ್ಥಿಯೂ ಇದೆ.

ಭಾರತ ಪ್ರವಾಸ ಬಳಿಕ ಆಸ್ಪ್ರೇಲಿಯಾ ತಂಡ ಯುಎಇಗೆ ತೆರಳಲಿದ್ದು, ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆ. ಮತ್ತೊಂದು ಹಂತದ ತಯಾರಿ ನಡೆಸಲು ತಂಡಕ್ಕೆ ಅವಕಾಶ ಸಿಗಲಿದೆ.

ತವರಿನಲ್ಲಿ ಧೋನಿಗೆ ಕೊನೆ ಅಂತಾರಾಷ್ಟ್ರೀಯ ಪಂದ್ಯ?

ಎಂ.ಎಸ್‌.ಧೋನಿ 2019ರ ಏಕದಿನ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸುವ ಸಾಧ್ಯತೆ ಇದ್ದು, ಇದು ಅವರು ತಮ್ಮ ತವರು ಮೈದಾನದಲ್ಲಿ ಆಡಲಿರುವ ಕೊನೆ ಅಂತಾರಾಷ್ಟ್ರೀಯ ಪಂದ್ಯ ಎನ್ನಲಾಗಿದೆ. ಧೋನಿ ಇಲ್ಲಿ ಆಡಿರುವ 3 ಏಕದಿನ ಪಂದ್ಯಗಳಲ್ಲಿ ಕೇವಲ 21 ರನ್‌ ಗಳಿಸಿದ್ದಾರೆ. ಟಿ20ಯಲ್ಲೂ ವೈಫಲ್ಯ ಕಂಡಿದ್ದರು. ಹೀಗಾಗಿ ತವರಿನ ಅಭಿಮಾನಿಗಳು ಅವರ ಕೊನೆ ಪಂದ್ಯ ಎನ್ನಲಾಗಿರುವ ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ.

ಸಂಭವನೀಯ ತಂಡಗಳು

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಅಂಬಟಿ ರಾಯುಡು, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜಾ, ಮೊಹಮದ್‌ ಶಮಿ/ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ.

ಆಸ್ಪ್ರೇಲಿಯಾ: ಉಸ್ಮಾನ್‌ ಖ್ವಾಜ, ಆ್ಯರೋನ್‌ ಫಿಂಚ್‌ (ನಾಯಕ), ಶಾನ್‌ ಮಾಷ್‌ರ್‍, ಪೀಟರ್‌ ಹ್ಯಾಂಡ್ಸ್‌ಕಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕಾರ್ರಿ, ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ನೇಥನ್‌ ಲಯನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್