ದುಬೈ[ಆ.27]: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 9 ಸ್ಥಾನ ಏರಿಕೆ ಕಂಡು ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡರೆ, ಬೌಲಿಂಗ್’ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ನಂ.01 ಸ್ಥಾನದಲ್ಲೇ ಮುಂದುವರೆದಿದ್ದಾರೆ.

ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ

ಟಾಪ್ 10 ಬ್ಯಾಟಿಂಗ್ ಶ್ರೇಯಾಂಕ:

ಬ್ಯಾಟಿಂಗ್ ವಿಭಾಗದ ಮೊದಲ 5 ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, 6 ರೇಟಿಂಗ್ ಅಂಕ ಹಿಂದಿರುವ ಸ್ಟೀವ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಆ ಬಳಿಕ ಕೇನ್ ವಿಲಿಯಮ್ಸನ್, ಚೇತೇಶ್ವರ್ ಪೂಜಾರ ಹಾಗೂ ಹೆನ್ರಿ ನಿಕೋಲಸ್ ಅಗ್ರ 5 ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ದೀಮುತ್ ಕರುಣರತ್ನೆ ಹಾಗೂ ಜೋ ರೂಟ್ 2 ಸ್ಥಾನ ಏರಿಕೆ ಕಂಡು ಆರು ಹಾಗೂ ಏಳನೇ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ್ದ ಕಿವೀಸ್ ಬ್ಯಾಟ್ಸ್’ಮನ್ ಟಾಮ್ ಲಾಥಮ್ 5 ಅಂಕ ಏರಿಕೆ ಕಂಡು 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಬ್ಯಾಟ್ಸ್’ಮನ್’ಗಳಾದ ಏಯ್ಡನ್ ಮಾರ್ಕ್’ರಮ್ ಹಾಗೂ ಕ್ವಿಂಟನ್ ಡಿಕಾಕ್ ತಲಾ 3 ಅಂಕ ಕುಸಿದಿದ್ದು, ಕ್ರಮವಾಗಿ 9 ಹಾಗೂ 10ನೇ ಸ್ಥಾನ ಹಂಚಿಕೊಂಡಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾ

ಟಾಪ್ 10 ಬೌಲಿಂಗ್ ಶ್ರೇಯಾಂಕ:

ಇನ್ನು ಬೌಲಿಂಗ್ ವಿಭಾಗದಲ್ಲೂ ಅಗ್ರ 4 ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ಯಾಟ್ ಕಮಿನ್ಸ್, ಕಗಿಸೋ ರಬಾಡ, ಜೇಮ್ಸ್ ಆ್ಯಂಡರ್’ಸನ್, ವೆರ್ನಾನ್ ಫಿಲಾಂಡರ್ ಕ್ರಮವಾಗಿ ಟಾಪ್ 4 ಶ್ರೇಯಾಂಕ ಹಂಚಿಕೊಂಡಿದ್ದಾರೆ. ಇನ್ನು ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 2 ಸ್ಥಾನ ಏರಿಕೆ ಕಂಡು 5ನೇ ಸ್ಥಾನಕ್ಕೆ ಏರಿಕೆ ಕಂಡರೆ, ನೀಲ್ ವ್ಯಾಗ್ನರ್ ಆರನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್’ನಲ್ಲಿ 5 ಹಾಗೂ ಒಟ್ಟಾರೆ 6 ವಿಕೆಟ್ ಪಡೆದು ಮಿಂಚಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 9 ಸ್ಥಾನ ಏರಿಕೆ ಕಂಡು 7ನೇ ಸ್ಥಾನಕ್ಕೇರಿದ್ದಾರೆ. ವಿಂಡೀಸ್ ವೇಗಿ ಕೀಮರ್ ರೋಚ್ 3 ಸ್ಥಾನ ಏರಿಕೆ ಕಂಡು 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಪಾಕ್ ವೇಗಿ ಮೊಹಮ್ಮದ್ ಅಬ್ಬಾಸ್ ಒಂದು ಸ್ಥಾನ ಕುಸಿತ ಕಂಡು 9ನೇ ಸ್ಥಾನಕ್ಕಿಳಿದರೆ, ಟೀಂ ಇಂಡಿಯಾದ ರವೀಂದ್ರ ಜಡೇಜಾ 5 ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕಿಳಿದಿದ್ದಾರೆ.

ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!

ಆಲ್ರೌಂಡರ್ ವಿಭಾಗದಲ್ಲಿ ಆ್ಯಷಸ್ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್’ನ ಬೆನ್ ಸ್ಟೋಕ್ಸ್ 2 ಸ್ಥಾನ ಏರಿಕೆ ಕಂಡು 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಮೊದಲ ಸ್ಥಾನದಲ್ಲಿ ಜೇಸನ್ ಹೋಲ್ಡರ್ ಇದ್ದರೆ, ಮೂರನೇ ಸ್ಥಾನದಲ್ಲಿ ಶಕೀಬ್ ಅಲ್ ಹಸನ್ ಆ ಬಳಿಕ ರವೀಂದ್ರ ಜಡೇಜಾ ಹಾಗೂ ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.