ದುಬೈ[ಜ.22]: ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದಲ್ಲದೆ, ವರ್ಷದ ಶ್ರೇಷ್ಠ ಏಕದಿನ ಮತ್ತು ಟೆಸ್ಟ್ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರೂ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. 

ಸತತ ಎರಡು ಬಾರಿ ಸರ್. ಗ್ಯಾರಿ ಸೋಬರ್ಸ್ ಟ್ರೋಫಿ[ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ] ಗೆದ್ದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದರ ಜತೆಗೆ ಐಸಿಸಿ ವರ್ಷದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿಯೂ ಕೊಹ್ಲಿ ಹೊರಹೊಮ್ಮಿದ್ದಾರೆ. ಇನ್ನು 2018ರ ವರ್ಷದ ಉದಯೋನ್ಮುಖ ಕ್ರಿಕೆಟಿಗ ಎನ್ನುವ ಕೀರ್ತಿಗೆ ಟೀಂ ಇಂಡಿಯಾ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಪಾತ್ರರಾಗಿದ್ದಾರೆ. ರಿಷಭ್ ಪಂತ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್’ಕೀಪರ್ ಎನ್ನುವ ಸಾಧನೆ ಮಾಡಿದ್ದರು. 

ಕಷ್ಟದಲ್ಲಿರೋ ಮಾಜಿ ಕ್ರಿಕೆಟಿಗನಿಗೆ ಪಾಂಡ್ಯ ಬ್ಲ್ಯಾಂಕ್ ಚೆಕ್: ಆದ್ರೆ ಕಂಡೀಶನ್ ಅಪ್ಲೈ!

ವಿರಾಟ್ ಕೊಹ್ಲಿ 2018ರ ಕ್ಯಾಲೆಂಡರ್ ವರ್ಷದಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿ 55.08ರ ಸರಾಸರಿಯಲ್ಲಿ 5 ಶತಕ ಸಹಿತ 1,322 ರನ್ ಸಿಡಿಸಿದ್ದಾರೆ. ಇನ್ನು 14 ಏಕದಿನ ಪಂದ್ಯಗಳನ್ನಾಡಿ 133ರ ಸರಾಸರಿಯಲ್ಲಿ 6 ಶತಕ ಸಹಿತ ಕೊಹ್ಲಿ 1,202 ರನ್ ಬಾರಿಸುವ ಮೂಲಕ ಎರಡೂ ವಿಭಾಗದಲ್ಲೂ ಗರಿಷ್ಠ ರನ್ ಸಿಡಿಸುವ ಮೂಲಕ ಶ್ರೇಷ್ಠ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದಾರೆ. 

2018ರ ಐಸಿಸಿ ಏಕದಿನ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದು, ಕೊಹ್ಲಿ ಜತೆಗೆ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಕೂಡಾ ಸ್ಥಾನ ಪಡೆದಿದ್ದಾರೆ.

ಹೀಗಿದೆ ನೋಡಿ 2018ರ ಐಸಿಸಿ ಏಕದಿನ ತಂಡ

ರೋಹಿತ್ ಶರ್ಮಾ[Ind], ಜಾನಿ ಬೈರ್’ಸ್ಟೋ[Eng], ವಿರಾಟ್ ಕೊಹ್ಲಿ(C)[Ind], ಜೋ ರೂಟ್[Eng], ರಾಸ್ ಟೇಲರ್[NZ], ಜೋಸ್ ಬಟ್ಲರ್[Eng], ಬೆನ್ ಸ್ಟೋಕ್ಸ್[Eng], ಮುಷ್ತಫಿಜುರ್ ರೆಹಮಾನ್[Ban], ರಶೀದ್ ಖಾನ್[Afg], ಕುಲ್ದೀಪ್ ಯಾದವ್[Ind], ಜಸ್ಪ್ರೀತ್ ಬುಮ್ರಾ[Ind]. 

ಐಸಿಸಿ ಟೆಸ್ಟ್ ತಂಡದಲ್ಲಿ ನಾಯಕ ಕೊಹ್ಲಿ ಜತೆಗೆ ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಕೂಡಾ ಸ್ಥಾನ ಪಡೆದಿದ್ದಾರೆ.

ಹೀಗಿದೆ ನೋಡಿ 2018ರ ಐಸಿಸಿ ಟೆಸ್ಟ್ ತಂಡ

ಟಾಮ್ ಲಾಥಮ್[NZ], ದಿಮುತ್ ಕರುಣಾರತ್ನೆ[SL], ಕೇನ್ ವಿಲಿಯಮ್ಸನ್[NZ],ವಿರಾಟ್ ಕೊಹ್ಲಿ(C)[Ind], ಹೆನ್ರಿ ನಿಕೋಲಸ್[NZ], ರಿಷಭ್ ಪಂತ್(WK)[Ind], ಜೇಸನ್ ಹೋಲ್ಡರ್[WI], ಕಗಿಸೋ ರಬಾಡ[SA], ನೇಥನ್ ಲಯನ್[Aus], ಜಸ್ಪ್ರೀತ್ ಬುಮ್ರಾ[Ind], ಮೊಹಮ್ಮದ್ ಅಬ್ಬಾಸ್[Pak]

ಐಸಿಸಿ ಇತರ ಪ್ರಶಸ್ತಿಗಳು:

ಟಿ20 ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್: ಆ್ಯರೋನ್ ಫಿಂಚ್[ಆಸ್ಟ್ರೇಲಿಯಾ]

ವರ್ಷದ ಕ್ರೀಡಾಸ್ಫೂರ್ತಿ ಪ್ರಶಸ್ತಿ: ಕೇನ್ ವಿಲಿಯಮ್ಸನ್[ನ್ಯೂಜಿಲೆಂಡ್]

ವರ್ಷದ ಅಸೋಸಿಯೇಟ್ ಕ್ರಿಕೆಟಿಗ: ಕಾಲಂ ಮೆಕ್ಲಾಯ್ಡ್[ಸ್ಕಾಟ್’ಲ್ಯಾಂಡ್]

ವರ್ಷದ ಅಂಪೈರ್: ಕುಮಾರ್ ಧರ್ಮಸೇನಾ[ಶ್ರೀಲಂಕಾ]