ವಡೋದರ[ಜ.22]: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೊಬ್ ಮಾರ್ಟಿನ್ ಅವರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಇದೀಗ ಟೀಂ ಇಂಡಿಯಾ ಆಲ್ರೌಂಡರ್ ಕೃಣಾಲ್ ಪಾಂಡ್ಯ ಮಾನವೀಯ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಡಿಸೆಂಬರ್’ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಾರ್ಟಿನ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ವೇಳೆ ಶ್ವಾಸಕೋಶ ಹಾಗೂ ಪಿತ್ತಜನಕಾಂಗಕ್ಕೆ ತೀವ್ರ ಹಾನಿಯಾಗಿತ್ತು. ಚಿಕಿತ್ಸಾ ವೆಚ್ಚ 11 ಲಕ್ಷ ರುಪಾಯಿ ಮೀರಿತ್ತು. ಚಿಕಿತ್ಸೆಗೆ ಹಣವಿಲ್ಲದಿದ್ದಾಗ ಆಸ್ಪತ್ರೆಯವರು ಶುಶ್ರೂಷೆಯನ್ನು ನಿಲ್ಲಿಸಿದ್ದರು. ಚಿಕಿತ್ಸಾ ವೆಚ್ಚಕ್ಕಾಗಿ ಮಾರ್ಟಿನ್ ಪತ್ನಿ ಬಿಸಿಸಿಐನ ನೆರವು ಕೋರಿದ್ದರು. ನೆರವಿಗೆ ಸ್ಪಂದಿಸಿದ ಬಿಸಿಸಿಐ 5 ಲಕ್ಷ ಹಾಗೂ ಬರೋಡ ಕ್ರಿಕೆಟ್ ಸಂಸ್ಥೆ 3 ಲಕ್ಷ ನೀಡಿತ್ತು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹಣಕಾಸಿನ ನೆರವು ನೀಡಿದ್ದಾರೆ. ಅಲ್ಲದೇ ಇನ್ನೂ ಹೆಚ್ಚಿನ ನೆರವು ಬೇಕಿದ್ದರೂ ಯಾವುದೇ ಮುಜುಗರವಿಲ್ಲದೇ ತಮ್ಮನ್ನು ಸಂಪರ್ಕಿಸಿ ಎಂದು ಮಾರ್ಟಿನ್ ಪತ್ನಿಗೆ ಸೌರವ್ ಗಂಗೂಲಿ ತಿಳಿಸಿದ್ದಾರೆ. ಇದಲ್ಲದೇ ಪಠಾಣ್ ಸಹೋದರರು, ಆಶಿಸ್ ನೆಹ್ರಾ, ಜಹೀರ್ ಖಾನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಮಾರ್ಟಿನ್’ಗೆ ನೆರವು ಒದಗಿಸಿದ್ದಾರೆ.

ಮಾಜಿ ಕ್ರಿಕೆಟಿಗನಿಗೆ ಅಪಘಾತ- ನೆರವಿಗೆ ದಾವಿಸಿದ ಟೀಂ ಇಂಡಿಯಾ ದಿಗ್ಗಜರು!

ಇದೀಗ ಕೃಣಾಲ್ ಪಾಂಡ್ಯ ಕೂಡಾ ಮಾಜಿ ಕ್ರಿಕೆಟಿಗನಿಗೆ ನೆರವಿನ ಹಸ್ತ ನೀಡಿದ್ದು, ಒಂದು ಕಂಡೀಶನ್’ನೊಂದಿಗೆ ’ಬ್ಲ್ಯಾಂಕ್ ಚೆಕ್’ ನೀಡಿದ್ದಾರೆ. ’ಸರ್ ದಯವಿಟ್ಟು ನಿಮಗೆಷ್ಟು ಹಣ ಬೇಕೋ ಅಷ್ಟನ್ನು ತೆಗೆದುಕೊಳ್ಳಿ, ಆದರೆ ಒಂದು ಲಕ್ಷಕ್ಕಿಂತ ಕಡಿಮೆ ಹಣ ತೆಗೆದುಕೊಳ್ಳಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.  

ಬೇಷರತ್‌ ಕ್ಷಮೆಯಾಚಿಸಿದ ಹಾರ್ದಿಕ್‌ ಪಾಂಡ್ಯ, ರಾಹುಲ್‌

ಜಾಕೊಬ್ ಮಾರ್ಟಿನ್ 1999ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ 10 ಪಂದ್ಯಗಳನ್ನು ಆಡಿದ್ದರು. ಇನ್ನು 138 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 9192 ರನ್ ಬಾರಿಸಿದ್ದಾರೆ. 2000-01ರ ರಣಜಿ ಟೂರ್ನಿಯಲ್ಲಿ ಬರೋಡ ತಂಡವನ್ನು ಮುನ್ನಡೆಸಿದ್ದ ಮಾರ್ಟಿನ್ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧನೆ ಮಾಡಿದ್ದರು. 

ಪಾಂಡ್ಯ, ರಾಹುಲ್‌ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್

ತಮ್ಮ ಕಾಲಘಟ್ಟದ ಕ್ರಿಕೆಟಿಗರಲ್ಲದಿದ್ದರೂ ಮಾರ್ಟಿನ್ ಅವರಿಗೆ ಸಹಾಯ ಮಾಡಲು ಮುಂದಾದ 27 ವರ್ಷದ ಕೃಣಾಲ್ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.