ನವದೆಹಲಿ[ಏ.20]: ವಿಶ್ವಕಪ್‌ ಮುಗಿದ ಬೆನ್ನಲ್ಲೇ ಭಾರತ ತಂಡ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ತೆರಳಲಿದ್ದು, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ವ್ಯಾಪ್ತಿಗೆ ಒಳಪಟ್ಟ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮುನ್ನ 7 ಮಂದಿ ಟೆಸ್ಟ್‌ ತಜ್ಞರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ. 

ಜುಲೈ ಹಾಗೂ ಆಗಸ್ಟ್‌ನಲ್ಲಿ ವಿಂಡೀಸ್‌ ವಿರುದ್ಧ ಸರಣಿ ನಡೆಯಲಿದ್ದು, ಜೂನ್‌ ಹಾಗೂ ಜುಲೈ ಎರಡನೇ ವಾರದ ವರೆಗೂ ಚೇತೇಶ್ವರ್‌ ಪೂಜಾರ, ಆರ್‌.ಅಶ್ವಿನ್‌, ಅಜಿಂಕ್ಯ ರಹಾನೆ, ಮಯಾಂಕ್‌ ಅಗರ್‌ವಾಲ್‌, ಹನುಮ ವಿಹಾರಿ, ಪೃಥ್ವಿ ಶಾ ಹಾಗೂ ಇಶಾಂತ್‌ ಶರ್ಮಾ ಕೌಂಟಿ ಕ್ರಿಕೆಟ್‌ನಲ್ಲಿ ಆಡಿ, ಸರಣಿಗೆ ತಯಾರಿ ನಡೆಸಲಿದ್ದಾರೆ.

ಪೂಜಾರ ಈಗಾಗಲೇ ಯಾರ್ಕ್ಶೈರ್‌ ತಂಡದೊಂದಿಗೆ 3 ವರ್ಷದ ಗುತ್ತಿಗೆ ಮಾಡಿಕೊಂಡಿದ್ದಾರೆ. ರಹಾನೆ, ಹ್ಯಾಂಪ್‌ಶೈರ್‌ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಅನುಮತಿಗಾಗಿ ರಹಾನೆ ಕಾಯುತ್ತಿದ್ದಾರೆ. ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇನ್ನಿಬ್ಬರು ಸದಸ್ಯರಿಂದ ಪತ್ರಕ್ಕೆ ಸಹಿಯಾಗುವುದು ಬಾಕಿ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೀಂ ಇಂಡಿಯಾದಿಂದ ಕಡೆಗಣನೆ- ವಿದೇಶಿ ಕ್ರಿಕೆಟ್‌ನತ್ತ ರಹಾನೆ!

ಕಳೆದ ಇಂಗ್ಲೆಂಡ್‌ ಪ್ರವಾಸದ ವೇಳೆ ಪ್ರಮುಖ ಕೌಂಟಿ ತಂಡಗಳಾದ ಲೀಸೆಸ್ಟರ್‌ಶೈರ್‌, ಎಸೆಕ್ಸ್‌, ನಾಟಿಂಗ್‌ಹ್ಯಾಮ್‌ಶೈರ್‌ನ ಸಿಇಒಗಳ ಜತೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಚರ್ಚೆ ನಡೆಸಿದ್ದರು ಎನ್ನಲಾಗಿದ್ದು, ಏಳೂ ಆಟಗಾರರು ವಿಂಡೀಸ್‌ಗೆ ತೆರಳುವ ಮುನ್ನ 3ರಿಂದ 4 ಪ್ರಥಮ ದರ್ಜೆ ಪಂದ್ಯಗಳನ್ನು ಆಡುವಂತೆ ಬಿಸಿಸಿಐ ವ್ಯವಸ್ಥೆ ಮಾಡುತ್ತಿದೆ.

ಲಾಭವೇನು?: ಇಂಗ್ಲೆಂಡ್‌ನಲ್ಲಿರುವ ವಾತಾವರಣಕ್ಕೂ ವಿಂಡೀಸ್‌ನ ವಾತಾವರಣಕ್ಕೂ ವ್ಯತ್ಯಾಸವಿದೆಯಾದರೂ, ಭಾರತೀಯ ಆಟಗಾರರು ಕೌಂಟಿಯಲ್ಲಿ ಆಡುವುದರಿಂದ ಲಾಭವಿದೆ. ವಿಂಡೀಸ್‌ನಲ್ಲಿ ಟೆಸ್ಟ್‌ ಪಂದ್ಯಗಳಿಗೆ ಬಳಕೆಯಾಗುವ ಡ್ಯೂಕ್ಸ್‌ ಚೆಂಡನ್ನೇ ಕೌಂಟಿಯಲ್ಲಿ ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ಎಸ್‌ಜಿ ಟೆಸ್ಟ್‌ ಬಾಲ್‌ ಉಪಯೋಗಿಸುವ ಕಾರಣ, ಆಟಗಾರರಿಗೆ ಡ್ಯೂಕ್ಸ್‌ನಲ್ಲಿ ಆಡಿದ ಅನುಭವ ಕಡಿಮೆ. ಕೌಂಟಿ ಅನುಭವ ಭಾರತದ ಟೆಸ್ಟ್‌ ತಜ್ಞರಿಗೆ ನೆರವಾಗಲಿದೆ.