ಕಟಕ್(ಫೆ.25): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಭಾನುವಾರ ಇಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ, ಅರುಣಾಚಲ ಪ್ರದೇಶ ವಿರುದ್ಧ 146 ರನ್‌ಗಳ ಗೆಲುವು ಸಾಧಿಸಿತು.

ಮೊದಲ ಪಂದ್ಯದಲ್ಲಿ ಮಿಜೋರಾಮ್ ಹಾಗೂ 2ನೇ ಪಂದ್ಯದಲ್ಲಿ ಬಂಗಾಳ ತಂಡವನ್ನು ಸದೆಬಡಿದಿದ್ದ ಕರ್ನಾಟಕ ಮತ್ತೊಂದು ಜಯದೊಂದಿಗೆ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 226 ರನ್‌ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಅರುಣಾಚಲ ಪ್ರದೇಶ 14.4 ಓವರ್'ಗಳಲ್ಲಿ ಕೇವಲ 80 ರನ್‌ಗಳಿಗೆ ಆಲೌಟ್ ಆಯಿತು. 

ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ 9 ವಿಕೆಟ್‌ ಗೆಲುವು

ಶ್ರೇಯಸ್ ಮೋಡಿ: ದೊಡ್ಡ ಗುರಿ ಬೆನ್ನತ್ತಿದ ಅರುಣಾಚಲ ತಂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಬ್ಯಾಟ್ಸ್‌ಮನ್ ಸಮರ್ಥ್ ಸೇಥ್ (49) ರನ್ ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತ ದಾಟಲಿಲ್ಲ. ಮೊದಲ ವಿಕೆಟ್‌ಗೆ 26 ರನ್‌ಗಳಿಸಿದ್ದು ಅರುಣಾಚಲ ತಂಡದ ಗರಿಷ್ಠ ಜೊತೆಯಾಟವಾಯಿತು. 35 ಎಸೆತ ಎದುರಿಸಿದ ಸಮರ್ಥ್ 6 ಬೌಂಡರಿ 1 ಸಿಕ್ಸರ್ ಸಿಡಿಸಿದರು. ನಂತರ ಬಂದವರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಸ್ಪಿನ್ನರ್ ಶ್ರೇಯಸ್ ಗೋಪಾಲ್ 11 ರನ್ ನೀಡಿ 5 ವಿಕೆಟ್ ಉರುಳಿಸಿದರು. 2 ವಿಕೆಟ್ ಪಡೆದ ಕೌಶಿಕ್ ರಾಜ್ಯದ ಗೆಲುವಿಗೆ ನೆರವಾದರು.

ಮನೀಶ್ ಶತಕ: ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ 2 ಪಂದ್ಯಗಳಿಗೆ ವಿಶ್ರಾಂತಿಯಲ್ಲಿದ್ದ ಮಯಾಂಕ್, ರೋಹನ್ ಕದಂ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಮಯಾಂಕ್ (15) ಬೇಗನೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಜೊತೆಯಲ್ಲಿ ಕರುಣ್ ನಾಯರ್ (11), ರೋಹನ್ (25) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. 4ನೇ ವಿಕೆಟ್‌ಗೆ ನಾಯಕ ಮನೀಶ್ ಜೊತೆಯಾದ ಶರತ್, ಅರುಣಾಚಲ ತಂಡದ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದರು. ಶರತ್ 1 ಬೌಂಡರಿ, 3 ಸಿಕ್ಸರ್ ಸಹಿತ 43 ರನ್‌ಗಳಿಸಿ ಔಟಾದರು. ಮನೀಶ್ ಕೇವಲ 46 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್'ನೊಂದಿಗೆ 111 ರನ್‌ಗಳಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ 226/4
ಅರುಣಾಚಲ ಪ್ರದೇಶ 80/10