ಪುಣೆ[ಮೇ.05]: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಚೆನ್ನೈ ಸೂಪರ್’ಕಿಂಗ್ಸ್ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಸಿಎಸ್’ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಆರ್’ಸಿಬಿ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು ಆರನೇ ಸ್ಥಾನದಲ್ಲೇ ಉಳಿದಿದೆ. ಇದರ ಜೊತೆಗೆ ಆರ್’ಸಿಬಿ ಪ್ಲೇ ಆಫ್ ಪ್ರವೇಶಿಸುವ ಕನಸು ಇನ್ನಷ್ಟು ಕಠಿಣವಾಗಿದೆ.
ಆರ್’ಸಿಬಿ ತಂಡವನ್ನು ಕೇವಲ 127 ರನ್’ಗಳಿಗೆ ನಿಯಂತ್ರಿಸಿದ್ದ ಸಿಎಸ್’ಕೆ, ಅಂಬಟಿ ರಾಯುಡು[32] ಹಾಗೂ ಎಂ.ಎಸ್. ಧೋನಿ[31*] ಆಕರ್ಷಕ ಬ್ಯಾಟಿಂಗ್ ನೆರವಿನಿಂದ 12 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. 
ಆರಂಭದಲ್ಲಿ ಸಿಎಸ್’ಕೆ ವಾಟ್ಸನ್[11] ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ರಾಯುಡು ಹಾಗೂ ಸುರೇಶ್ ರೈನಾ ಎರಡನೇ ವಿಕೆಟ್’ಗೆ 44 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು 50 ರನ್’ಗಳ ಗಡಿ ದಾಟಿಸಿದರು. ರೈನಾ 25 ರನ್ ಬಾರಿಸಿದರೆ, ರಾಯುಡು 32 ರನ್ ಬಾರಿಸಿ ಮುರುಗನ್ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಧೋನಿ ಹಾಗೂ ಡ್ವೇನ್ ಬ್ರಾವೋ 5ನೇ ವಿಕೆಟ್’ಗೆ ಮುರಿಯದ 48 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್’ಸಿಬಿ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ಕಾಲಿನ್ ಡಿ ಗ್ರಾಂಡ್’ಹೋಂ ಹಾಗೂ ಮುರುಗನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್’ಸಿಬಿ ಪಾರ್ಥಿವ್ ಪಟೇಲ್[53] ಏಕಾಂಗಿ ಹೋರಾಟದ ನೆರವಿನಿಂದ 127 ರನ್’ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಪಟೇಲ್ ಹಾಗೂ ಸೌಥಿ ಹೊರತು ಪಡಿಸಿ ಆರ್’ಸಿಬಿಯ ಉಳಿದ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ಮುಟ್ಟಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್:
ಆರ್’ಸಿಬಿ: 127/9
ಪಾರ್ಥಿವ್ ಪಟೇಲ್: 53
ಜಡೇಜಾ:18/3
ಸಿಎಸ್’ಕೆ: 128/4
ರಾಯುಡು: 32
ಉಮೇಶ್ ಯಾದವ್: 15/2