ಸ್ಟೀವ್ ಸ್ಮಿತ್, ವಾರ್ನರ್‌ಗೆ ಐಪಿಎಲ್ ಖೋತಾ?

steve waugh and Smith may be disqualified for IPL
Highlights

ಚೆಂಡು ವಿರೂಪ ಮಾಡಿ ಶಿಕ್ಷೆಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಿಚಾರದಲ್ಲಿ ಐಪಿಎಲ್ ಆಡಳಿತ ಸಮಿತಿ ಹಾಗೂ ಬಿಸಿಸಿಐ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ.

ನವದೆಹಲಿ: ಚೆಂಡು ವಿರೂಪ ಮಾಡಿ ಶಿಕ್ಷೆಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಿಚಾರದಲ್ಲಿ ಐಪಿಎಲ್ ಆಡಳಿತ ಸಮಿತಿ ಹಾಗೂ ಬಿಸಿಸಿಐ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. 

ಸ್ಮಿತ್ ಹಾಗೂ ವಾರ್ನರ್‌ರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸದ್ಯ ಯಾವುದೇ ನಿರ್ಣಯ ಕೈಗೊಳ್ಳದಿರಲು ಬಿಸಿಸಿಐ ತೀರ್ಮಾನಿಸಿದೆ. ವಿವಾದದ ಸುಳಿಗೆ ಸಿಲುಕಿ ಈಗಾಗಲೇ ಆಸ್ಟ್ರೇಲಿಯಾ ತಂಡದ ನಾಯಕತ್ವ ಕಳೆದು ಕೊಂಡಿರುವ ಸ್ಮಿತ್ 11ನೇ ಆವೃತ್ತಿಯ ಐಪಿಎಲ್ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಥಾನದಿಂದ ಹಾಗೂ ಆಸೀಸ್ ಉಪ ನಾಯಕ ವಾರ್ನರ್, ಸನ್‌ರೈಸರ್ಸ್‌ ಹೈದ್ರಾಬಾದ್ ನಾಯಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ಮಿತ್ ಸ್ಥಾನಕ್ಕೆ ಅಜಿಂಕ್ಯ ರಹಾನೆ ಹೆಸರು ಬಲವಾಗಿ ಕೇಳಿ ಬಂದಿದೆ. 

ಸ್ಮಿತ್ ಹೇಳಿದ್ದೇನು?


3ನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಸ್ಮಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. 'ಬಾಲ್ ಟ್ಯಾಂಪರಿಂಗ್ ಬಗ್ಗೆ ತಂಡದ ಆಟಗಾರರಿಗೆ ಚೆನ್ನಾಗಿ ಅರಿವಿತ್ತು. ಈ ಬಗ್ಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಚರ್ಚೆ ನಡೆಸಲಾಗಿತ್ತು. ಆಗಿರುವ ಘಟನೆ ಬಗ್ಗೆ ನಮಗೆ ಬೇಸರ ಇದೆ,' ಎಂದಿದ್ದರು.

'ಇದು ನನ್ನ ಹಾಗೂ ತಂಡದಿಂದ ಆದ ಅತೀ ದೊಡ್ಡ ತಪ್ಪಾಗಿದೆ. ನಾನೇ ಇದರ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಇದರಲ್ಲಿ ಕೋಚ್‌ಗಳ ಪಾತ್ರವಿಲ್ಲ,' ಎಂದಿದ್ದರು. ಇದೇ ವೇಳೆ 'ಪ್ರಕರಣದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದಿದ್ದ ಸ್ಮಿತ್, ನಾಯಕತ್ವ ತೊರೆಯುವ ಪ್ರಶ್ನೆಯೇ ಇಲ್ಲ,' ಎಂದಿದ್ದರು.

ಆದರೆ, ಕೋಚ್‌ಗಳ ಪಾತ್ರ ಇಲ್ಲ ಎಂಬುದನ್ನು ಒಪ್ಪಲು ಅನೇಕರು ನಿರಾಕರಿಸಿದ್ದರು. ಏಕೆಂದರೆ ಪಂದ್ಯದ ಪ್ರತಿ ದೃಶ್ಯಾವಳಿಯನ್ನು ಗಮನಿಸುತ್ತಿದ್ದ ಕೋಚ್ ಲೆಹ್ಮನ್ ಸುಮ್ಮನಿದ್ದದ್ದು, ಏಕೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಏನಿದು ಚೆಂಡು ವಿರೂಪ ವಿವಾದ?


ತೃತೀಯ ಟೆಸ್ಟ್‌ನ 3ನೇ ದಿನದಾಟದ ಚಹಾ ವಿರಾಮಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ಈ ಘಟನೆ ನಡೆದಿದೆ. ಈ ವೇಳೆ ಚೆಂಡನ್ನುಪಡೆದುಕೊಂಡ ಬ್ಯಾನ್‌ಕ್ರಾಫ್ಟ್, ನಡು ಬೆರಳಿನಲ್ಲಿ ಹಳದಿ ಬಣ್ಣದ ಟೇಪ್‌ವೊಂದನ್ನು ಇರಿಸಿಕೊಂಡು ಅದನ್ನು ಚೆಂಡಿಗೆ ಉಜ್ಜಿದ್ದಾರೆ. ಬಳಿಕ ಆ ವಸ್ತುವನ್ನು ಮೆತ್ತಗೆ ಮತ್ತೆ ಜೀಬಿಗಿಳಿಸಿದ್ದಾರೆ. ಇದು ನೇರಪ್ರಸಾರದಲ್ಲಿ ದಾಖಲಾಗಿದೆ. ಇದು ಡ್ರೆಸಿಂಗ್ ಕೊಠಡಿಯಲ್ಲಿ ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್ ಗಮನಕ್ಕೆ ಬಂದಿದ್ದು, ಅವರು ಡಗೌಟ್‌ನಲ್ಲಿ ಕುಳಿತಿದ್ದ ಹ್ಯಾಂಡ್ಸ್ ಕೊಂಬ್ ಗೆ ವಾಕಿಟಾಕಿ ಮೂಲಕ ಮಾಹಿತಿ ನೀಡಿದ್ದಾರೆ. ಬಳಿಕ ಮೈದಾನಕ್ಕೆ ಆಗಮಿಸಿದ ಹ್ಯಾಂಡ್ಸ್‌ಕೊಂಬ್ ಈ ವಿಷಯವನ್ನು ಬ್ಯಾನ್ ಕ್ರಾಫ್ಟ್ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಬ್ಯಾನ್‌ಕ್ರಾಫ್ಟ್, ತಮ್ಮ ಜೇಬಿನಲ್ಲಿದ್ದ ಹಳದಿ ಬಣ್ಣದ ವಸ್ತುವನ್ನು ಪ್ಯಾಂಟ್ ಒಳಗೆ ಬಚ್ಚಿಟ್ಟುಕೊಂಡಿದ್ದಾರೆ. ಬಳಿಕ ಟಿವಿ ಅಂಪೈರ್‌ಗಳು ಇದರ ಬಗ್ಗೆ ಮಾಹಿತಿ ನೀಡಿದಾಗ, ಮೈದಾನದಲ್ಲಿದ್ದ ಅಂಪೈರ್‌ಗಳು ಈ ಬಗ್ಗೆ ಬ್ಯಾನ್‌ಕ್ರಾಫ್ಟ್‌ರ ವಿಚಾರಣೆ ನಡೆಸಿದ್ದರು. ಈ ವೇಳೆ ಬ್ಯಾನ್‌ಕ್ರಾಫ್ಟ್ ತಮ್ಮ  ಒಳ ಜೇಬಿನಿಂದ ಹಳದಿ ಬಣ್ಣದ ಟೇಪ್‌ನಂತಿದ್ದ ವಸ್ತುವನ್ನು ತೆಗೆದು ಅಂಪೈರ್‌ಗಳಿಗೆ ತೋರಿಸಿದ್ದರು. ತದನಂತರ ಅಂಪೈರ್‌ಗಳು ಯಾವುದೇ ಕ್ರಮಕ್ಕೆ ಮುಂದಾಗದೇ ಅದೇ ಚೆಂಡಿನಲ್ಲಿ ಆಟ ಮುಂದುವರಿಸಿದ್ದರು. ಮೈದಾನದಲ್ಲಿದ್ದ ದೊಡ್ಡ ಸ್ಕ್ರೀನ್‌ಗಳಲ್ಲಿ ಈ ದೃಶ್ಯಾವಳಿಗಳು ಬಿತ್ತರಗೊಂಡಿದ್ದವು. ಚೆಂಡು ಬದಲಿಸದ ಅಂಪೈರ್‌ಗಳ ನಿರ್ಧಾರ ಸಹ ಟೀಕೆಗೆ ಗುರಿಯಾಗಿತ್ತು.

loader