9 ವರ್ಷದ ಅಭಿಮಾನಿಯ ಕ್ಷಮೆ ಕೇಳಿದ ಸ್ಮಿತ್; ಇದಕ್ಕೆ ಸಿಕ್ಕ ಪ್ರತ್ಯುತ್ತರವೇನು..?

First Published 31, Mar 2018, 5:35 PM IST
Steve Smith Sends Nine Year Old Fan A Personal Apology
Highlights

ಶುಕ್ರವಾರ ದೆಬೊರಾ ಟ್ವೀಟರ್‌'ನಲ್ಲಿ ಸಂದೇಶವೊಂದು ಸ್ವೀಕರಿಸಿದರು. ಅದು ಸ್ವತಃ ಸ್ಟೀವ್ ಸ್ಮಿತ್ ಕಳುಹಿಸಿದ್ದ ಸಂದೇಶ. ‘ನಿಮ್ಮ ಮಗನಿಗೆ ನನ್ನ ಕ್ಷಮೆ ತಿಳಿಸಿ. ಆತನ ಮನಸಿಗೆ ನೋವುಂಟು ಮಾಡಿದ್ದೇನೆ’ ಎಂದು ಸ್ಮಿತ್ ಬರೆದಿದ್ದರು.

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಇದೀಗ ಅಭಿಮಾನಿಗಳ ಕ್ಷಮೆಯಾಚಿಸುತ್ತಿದ್ದಾರೆ.

ಗುರುವಾರ ಸಿಡ್ನಿಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸ್ಮಿತ್, ಕ್ಷಮೆಯಾಚಿಸುತ್ತಾ ಕಣ್ಣೀರಿಟ್ಟಿದ್ದರು. ಈ ದೃಶ್ಯಗಳು ವಿಶ್ವಾದ್ಯಂತ ಪ್ರಸಾರವಾಗಿತ್ತು, ಹಾಗೇ ಕಣ್ಣೀರಿಟ್ಟ ಸ್ಮಿತ್ ಮೇಲೆ ಅನುಕಂಪವೂ ಮೂಡಿತ್ತು.

ಸ್ಮಿತ್ ಸುದ್ದಿಗೋಷ್ಠಿ ಬಳಿಕ ಆಸ್ಟ್ರೇಲಿಯಾದ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತೆ ಹಾಗೂ ಸುದ್ದಿವಾಚಕಿ ದೆಬೊರಾ ನೈಟ್, ಟ್ವೀಟ್'ವೊಂದನ್ನು ಮಾಡಿದ್ದರು. ಅದರಲ್ಲಿ, ‘ಸ್ಮಿತ್ ಸುದ್ದಿಗೋಷ್ಠಿ ವೀಕ್ಷಿಸಿದ ನನ್ನ 9 ವರ್ಷದ ಪುತ್ರ ಡಾರ್ಚಿಯನ್ನು ಸಮಾಧಾನ ಪಡಿಸಲು 20 ನಿಮಿಷಗಳು ಬೇಕಾಯಿತು. ಡಾರ್ಚಿ, ಸ್ಮಿತ್‌'ರ ಬಹುದೊಡ್ಡ ಅಭಿಮಾನಿ. ಆತನಿಗೆ ಹಾಗೂ ಎಲ್ಲಾ ಮಕ್ಕಳಿಗೂ ಸ್ಮಿತ್‌'ಗೆ ಪತ್ರವೊಂದನ್ನು ಬರೆದು ಎಲ್ಲರೂ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿಸಲು ಪ್ರೇರೇಪಿಸುತ್ತಿದ್ದೇನೆ’ ಎಂದು ಬರೆದಿದ್ದರು.

ಶುಕ್ರವಾರ ದೆಬೊರಾ ಟ್ವೀಟರ್‌'ನಲ್ಲಿ ಸಂದೇಶವೊಂದು ಸ್ವೀಕರಿಸಿದರು. ಅದು ಸ್ವತಃ ಸ್ಟೀವ್ ಸ್ಮಿತ್ ಕಳುಹಿಸಿದ್ದ ಸಂದೇಶ. ‘ನಿಮ್ಮ ಮಗನಿಗೆ ನನ್ನ ಕ್ಷಮೆ ತಿಳಿಸಿ. ಆತನ ಮನಸಿಗೆ ನೋವುಂಟು ಮಾಡಿದ್ದೇನೆ’ ಎಂದು ಸ್ಮಿತ್ ಬರೆದಿದ್ದರು.

ಸ್ಮಿತ್ ಸಂದೇಶ ಓದಿದ ಬಳಿಕ ದೆಬೊರಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬಹಿರಂಗಗೊಳಿಸಿದ್ದು, ‘ಸಂಪರ್ಕಿಸಿದ್ದಕ್ಕೆ ಧನ್ಯವಾದಗಳು ಸ್ಮಿತ್. ಮೊದಲಿಗಿಂತಲೂ ಹೆಚ್ಚು ನಿಮ್ಮನ್ನು ಇಷ್ಟು ಪಡುವುದಾಗಿ ನನ್ನ ಪುತ್ರ ನಿಮಗೆ ತಿಳಿಸಲು ಹೇಳಿದ್ದಾನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಜತೆಗೆ ನಿಷೇಧಕ್ಕೆ ಗುರಿಯಾಗಿರುವ ಆಟಗಾರರಿಗೆ ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

loader