ಮತ್ತೊಂದೆಡೆ ಏಕಾಂಗಿ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ ವೃತ್ತಿ ಜೀವನದ 6ನೇ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಟೀಂ ಇಂಡಿಯಾ 536/7 ರನ್'ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ನವದೆಹಲಿ(ಡಿ.03): ನಾಯಕ ವಿರಾಟ್ ಕೊಹ್ಲಿಯ(243) ಆಕರ್ಷಕ ದ್ವಿಶತಕ ಹಾಗೂ ರೋಹಿತ್ ಶರ್ಮಾರ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 536/7 ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಇದಕ್ಕುತ್ತರವಾಗಿ ಶ್ರೀಲಂಕಾ ಎರಡನೇ ದಿನದಾಟ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಿದ್ದು, ಇನ್ನೂ 405 ರನ್'ಗಳ ಹಿನ್ನಡೆಯಲ್ಲಿದೆ.
ಮೊದಲ ಇನಿಂಗ್ಸ್'ನಲ್ಲಿ ಟೀಂ ಇಂಡಿಯಾ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾಕ್ಕೆ ಮೊದಲ ಎಸೆತದಲ್ಲೇ ಶಮಿ ಶಾಕ್ ನೀಡಿದರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವಾಗೆ ಮತ್ತೋರ್ವ ವೇಗಿ ಇಶಾಂತ್ ಶರ್ಮಾ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಶ್ರೀಲಂಕಾ ತಂಡದ ಮೊತ್ತ 14/2. ಈ ಬಳಿಕ ಜತೆಯಾದ ಪೆರೇರಾ ಹಾಘೂ ಮ್ಯಾಥ್ಯೂಸ್ ತಂಡಕ್ಕೆ ಆಸರೆಯಾದರು. 42 ರನ್ ಬಾರಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಪೆರೇರಾರನ್ನು ಎಡಗೈ ಸ್ಪಿನ್ನರ್ ಜಡೇಜಾ ಎಲ್'ಬಿ ಬಲೆಗೆ ಕೆಡವಿದರು. ಮತ್ತೊಂದೆಡೆ ಮ್ಯಾಥ್ಯೂಸ್(57*) ಅರ್ಧಶತಕ ಬಾರಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ನಾಯಕ ಚಾಂಡಿಮಲ್(25*) ಸಾಥ್ ನೀಡಿದ್ದಾರೆ.
ಇದಕ್ಕೂ ಮೊದಲು ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಆರಂಭವನ್ನೇ ಪಡೆಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶರ್ಮಾ ಈ ಬಾರಿ 65 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಆಗ ತಂಡದ ಮೊತ್ತ 500/5. ಮತ್ತೊಂದೆಡೆ ಏಕಾಂಗಿ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ ವೃತ್ತಿ ಜೀವನದ 6ನೇ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಟೀಂ ಇಂಡಿಯಾ 536/7 ರನ್'ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಲಂಕಾ ಪರ ಸಂದಕನ್ 4 ವಿಕೆಟ್ ಪಡೆದರೆ, ಲಮಾಗೆ 2 ಹಾಗೂ ಪೆರೇರಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ: 536/7
ಕೊಹ್ಲಿ: 243
ಸಂದಕನ್: 167/4
ಶ್ರೀಲಂಕಾ: 131/3
ಮ್ಯಾಥ್ಯೂಸ್: 57
ಜಡೇಜಾ : 24/1
(*ಎರಡನೇ ದಿನದಾಟ ಮುಕ್ತಾಯಕ್ಕೆ)
