1000 ಕ್ರೀಡಾ ಪ್ರತಿಭೆ ಆಯ್ಕೆಗೆ ದೇಶಾದ್ಯಂತ 'ಖೇಲೋ ಇಂಡಿಯಾ'
‘ಕ್ರೀಡೆಯಲ್ಲಿ ಪವಾಡ ನಡೆಯುವುದಿಲ್ಲ. ನಾವು ಹೊಸ ಪ್ರತಿಭೆಗಳನ್ನು ಹುಡುಕಿ ಅವರಿಗೆ ತರಬೇತಿ ಒದಗಿಸಿ ಪವಾಡ ಸೃಷ್ಟಿಸುವಂತೆ ಮಾಡಬೇಕು’ ಎಂದು ರಾಥೋಡ್ ಹೇಳಿದ್ದಾರೆ.
ನವದೆಹಲಿ(ಅ.04): ದೇಶಾದ್ಯಂತ ಕ್ರೀಡಾ ಪ್ರತಿಭಾನ್ವೇಷಣೆಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟ ಡಿಸೆಂಬರ್-ಜನವರಿಯಲ್ಲಿ ನಡೆಯಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಘೋಷಿಸಿದ್ದಾರೆ.
ಡಿಸೆಂಬರ್'ನಲ್ಲಿ ರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಟ ನಡೆದರೆ, 2018ರ ಜನವರಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಲಿದೆ ಎಂದಿದ್ದಾರೆ. ‘ಕ್ರೀಡೆಯನ್ನು ನಾವು ನೋಡುವ ರೀತಿ ಬದಲಾಗಬೇಕು. ಭಾರತೀಯ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದ್ದರೆ ಎಲ್ಲರೂ ಕೈಜೋಡಿಸಬೇಕು. ಯುವ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಸರ್ಕಾರ ವೇದಿಕೆ ಕಲ್ಪಿಸುತ್ತದೆ’ ಎಂದಿರುವ ಕ್ರೀಡಾ ಸಚಿವರು, ‘ಇದೇ ಮೊದಲ ಬಾರಿಗೆ ಸರ್ಕಾರ, ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುತ್ತಿದೆ. ಇದರೊಂದಿಗೆ ಕೆಳಹಂತದಲ್ಲೇ ಪ್ರತಿಭೆಗಳನ್ನು ಹುಡುಕಲು ಸಹಾಯವಾಗುತ್ತದೆ ಎಂದಿದ್ದಾರೆ.
ಖಾಸಗಿ ಸಂಸ್ಥೆಗಳ ಸಹಭಾಗಿತ್ವ: ‘ಖೇಲೋ ಇಂಡಿಯಾ’ ಕ್ರೀಡಾಕೂಟಕ್ಕೆ ಖಾಸಗಿ ಸಂಸ್ಥೆಗಳು ಸಹ ಕೈಜೋಡಿಸಲಿವೆ. ಅಲ್ಲದೇ ಕ್ರೀಡಾಕೂಟವನ್ನು ನೇರ ಪ್ರಸಾರ ಮಾಡಲಾಗುವುದು ಎಂದಿರುವ ರಾಥೋಡ್ ‘ಕ್ರೀಡಾಕೂಟವನ್ನು ಏಷ್ಯಾ ಗೇಮ್ಸ್ ರೀತಿ ದೊಡ್ಡ ಮಟ್ಟದಲ್ಲಿ ನಡೆಸುವುದು ನಮ್ಮ ಗುರಿಯಾಗಿದೆ. ಈ ಕ್ರೀಡಾಕೂಟದಿಂದ 1000 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರ ತರಬೇತಿಗೆಂದು 8 ವರ್ಷಗಳಿಗೆ ₹5 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುವುದು. ಪ್ರತಿ ವರ್ಷ 1 ಸಾವಿರ ಮಕ್ಕಳ ಆಯ್ಕೆ ನಡೆಸಲಾಗುವುದು’ ಎಂದು ಹೇಳಿದ್ದಾರೆ. ‘ಕ್ರೀಡೆಯಲ್ಲಿ ಪವಾಡ ನಡೆಯುವುದಿಲ್ಲ. ನಾವು ಹೊಸ ಪ್ರತಿಭೆಗಳನ್ನು ಹುಡುಕಿ ಅವರಿಗೆ ತರಬೇತಿ ಒದಗಿಸಿ ಪವಾಡ ಸೃಷ್ಟಿಸುವಂತೆ ಮಾಡಬೇಕು’ ಎಂದು ರಾಥೋಡ್ ಹೇಳಿದ್ದಾರೆ.