ಬೆಂಗಳೂರು[ಮಾ.26]: ರಾಜಸ್ಥಾನ ರಾಯಲ್ಸ್- ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿದ ಮಂಕಡಿಂಗ್ ರನೌಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಟ್ಲರ್ ರನೌಟ್ ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಅಶ್ವಿನ್ ಮಾಡಿದ ರನೌಟ್’ಗೆ ಪರ-ವಿರೋಧಗಳು ವ್ಯಕ್ತವಾಗಿವೆ.

ಮಂಕಡ್ ರನೌಟ್- ಜೋಸ್ ಬಟ್ಲರ್‌ಗಿದು ಮೊದಲೇನಲ್ಲ!

ರಾಜಸ್ಥಾನ ರಾಯಲ್ಸ್ ತಂಡದ ಅಂಬಾಸಿಡರ್ ಆಗಿರುವ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಆಪ್’ಸ್ಪಿನ್ನರ್ ಅಶ್ವಿನ್ ಮಾಡಿದ ಮಂಕಡಿಂಗ್ ರನೌಟ್ ಬಗ್ಗೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅನುಭವಿ ಕ್ರಿಕೆಟಿಗರು ಕ್ರೀಡಾಸ್ಫೂರ್ತಿಯಿಂದ ಆಡಬೇಕು. ಅದಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಆಡುವಾಗ ಕಿರಿಯರಿಗೆ ಮಾದರಿಯಾಗಿರಬೇಕು ಎಂದು ಅಶ್ವಿನ್ ಬಗ್ಗೆ ವಾರ್ನ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ಕ್ರಿಕೆಟಿಗ ಕಮ್ರಾನ್ ಅಕ್ಮಲ್, ’ಕ್ರೀಡಾಸ್ಫೂರ್ತಿಗೆ ಯಾವತ್ತೂ ಧಕ್ಕೆಯಾಗಬಾರದು. ಕ್ರೀಡಾಸ್ಫೂರ್ತಿಯನ್ನು ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ಮಹೇಂದ್ರ ಸಿಂಗ್ ಧೋನಿ, ಸೌರವ್ ಗಂಗೂಲಿ ಅವರನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ಕಮ್ರಾನ್ ಅಕ್ಮಲ್ ಮೊದಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಪಾಲ್ಗೊಂಡಿದ್ದರು. ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿ ಚೊಚ್ಚಲ ಆವೃತ್ತಿಯ ಚಾಂಪಿಯನ್ ತಂಡದ ಸದಸ್ಯರಾಗಿ ಹೊರಹೊಮ್ಮಿದ್ದರು. 

ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಬಟ್ಲರ್[69] ಅವರನ್ನು 13ನೇ ಓವರ್’ನಲ್ಲಿ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದ್ದರು. ಬಟ್ಲರ್ ರನೌಟ್ ಪಂದ್ಯದ ಗತಿಯನ್ನೇ ಬದಲಾಯಿಸಿತ್ತು.