Asianet Suvarna News Asianet Suvarna News

ಅದ್ಭುತ ಆವಿಷ್ಕಾರ: ಕ್ರಿಕೆಟ್‌ನಲ್ಲಿ ಶೀಘ್ರ ಸ್ಮಾರ್ಟ್‌ಬಾಲ್‌ ಬಳಕೆ!

ಆಧುನಿಕ ದಿನಮಾನಗಳಲ್ಲಿ ಕ್ರಿಕೆಟ್‌ನಲ್ಲಿ ಹಲವಾರು ಆವಿಷ್ಕಾರವಾಗಿರುವುದನ್ನು ನಾವೆಲ್ಲಾ ನೋಡಿದ್ದೇವೆ. ತಂತ್ರಜ್ಞಾನಗಳ ಬಳಕೆಯಿಂದ ಕ್ರಿಕೆಟ್, ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದೆ. ಈ ನಡುವೆ ಸ್ಮಾರ್ಟ್ ಬ್ಯಾಟ್ ಬಳಕೆಯ ಬಳಿಕ, ಬಾಲ್‌ಗೂ ಚಿಪ್ ಅಳವಡಿಸುವ ಪ್ರಯತ್ನ ನಡೆದಿದೆ. ಅಷ್ಟಕ್ಕೂ ಸ್ಮಾರ್ಟ್ ಬಾಲ್ ಎಂದರೇನು..? ಅದರ ಬಳಕೆ ಹೇಗೆ, ಏನೆಲ್ಲಾ ಉಪಯೋಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...    

Smart ball with microchip that may soon in Cricket
Author
Melbourne VIC, First Published Aug 13, 2019, 1:36 PM IST

ಮೆಲ್ಬರ್ನ್‌(ಆ.13): ಕ್ರಿಕೆಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಬೌಲರ್‌ ಎಷ್ಟು ವೇಗದಲ್ಲಿ ಚೆಂಡನ್ನು ಎಸೆಯುತ್ತಾನೆ, ಬ್ಯಾಟ್ಸ್‌ಮನ್‌ ಎಷ್ಟು ವೇಗದಲ್ಲಿ ಚೆಂಡನ್ನು ಬೌಂಡರಿಗಟ್ಟುತ್ತಾನೆ, ಚೆಂಡು ಎಷ್ಟು ದೂರ ಪ್ರಯಾಣಿಸಿತು. ಎಷ್ಟು ಸಮಯದಲ್ಲಿ ಪ್ರಯಾಣಿಸಿತು. ಹೀಗೆ ಪ್ರತಿಯೊಂದು ಮಾಹಿತಿ ವೀಕ್ಷಕರಿಗೆ ಲಭ್ಯವಾಗುತ್ತದೆ. ಡಿಆರ್‌ಎಸ್‌ ಪರಿಚಯವಾದ ಬಳಿಕ ಆಟದಲ್ಲಿ ತಂತ್ರಜ್ಞಾನದ ಬಳಕೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಇತ್ತೀಚೆಗಷ್ಟೇ ಸ್ಮಾರ್ಟ್‌ ಬ್ಯಾಟ್‌ ಸಹ ಅನಾವರಣಗೊಂಡಿತ್ತು. ಇದೀಗ ‘ಸ್ಮಾರ್ಟ್‌ ಬಾಲ್‌’ ಸರದಿ. ಬ್ಯಾಟ್‌ನಂತೆ ಚೆಂಡಿನಲ್ಲೂ ಮೈಕ್ರೋಚಿಪ್‌ ಬಳಕೆ ಶುರುವಾಗಿದೆ.

ಕುಂಬ್ಳೆಯಿಂದ 'ಸ್ಮಾರ್ಟ್‌ ಬ್ಯಾಟ್‌' ತಂತ್ರಜ್ಞಾನ!

ಕೂಕಬುರ್ರಾ ಆವಿಷ್ಕಾರ: ಕ್ರಿಕೆಟ್‌ಗೆ ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡುಗಳನ್ನು ಪರಿಚಯಿಸಿದ ಆಸ್ಪ್ರೇಲಿಯಾದ ಚೆಂಡು ತಯಾರಕ ಸಂಸ್ಥೆ ಕೂಕಬುರ್ರಾ, ಇದೀಗ ಮೈಕ್ರೋಚಿಪ್‌ವುಳ್ಳ ‘ಸ್ಮಾರ್ಟ್‌ ಬಾಲ್‌’ ಅನ್ನು ಹೊರತರುತ್ತಿದೆ. ಈ ಚೆಂಡಿನ ಬಳಕೆಯಿಂದ ಕ್ರಿಕೆಟ್‌ ಆಟಕ್ಕೆ ಮತ್ತಷ್ಟು ರೋಚಕತೆ ಬರಲಿದೆ. ಕೂಕಬುರ್ರಾ ಸಂಸ್ಥೆ ಈ ಸ್ಮಾರ್ಟ್‌ ಬಾಲ್‌ ಪರೀಕ್ಷೆಯ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ವಿಶ್ವದ ಪ್ರತಿಷ್ಠಿತ ಟಿ20 ಲೀಗ್‌ಗಳಲ್ಲಿ ಬಳಕೆಯಾಗುವುದನ್ನು ನೋಡಲು ಕಾತರಿಸುತ್ತಿದೆ. ಕೆಲ ವರ್ಷಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೂ ಚಿಪ್‌ವುಳ್ಳ ಚೆಂಡನ್ನು ಪೂರೈಸುವ ಗುರಿ ಹೊಂದಿದೆ.

ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ: ಗೇಲ್ ಕನಸು ಭಗ್ನ..!

ಸ್ಮಾಟ್‌ ಬಾಲ್‌ ಎಂದರೇನು?

ಚೆಂಡಿನೊಳಗೆ ಮೈಕ್ರೋಚಿಪ್‌ ಅಳವಡಿಸಲಾಗಿರುತ್ತದೆ. ಇದರ ಸಹಾಯದಿಂದ ಬೌಲರ್‌ ಚೆಂಡನ್ನು ಎಸೆಯುವಾಗ ಎಷ್ಟು ವೇಗದಲ್ಲಿ ಎಸೆಯುತ್ತಾನೆ, ಚೆಂಡು ಪುಟಿದೇಳುವ ಮುನ್ನ ಎಷ್ಟು ವೇಗದಲ್ಲಿ ಪ್ರಯಾಣಿಸುತ್ತದೆ, ಪುಟಿದೆದ್ದ ಬಳಿಕ ಎಷ್ಟು ವೇಗದಲ್ಲಿ ಬ್ಯಾಟ್ಸ್‌ಮನ್‌ನನ್ನು ತಲುಪುತ್ತದೆ. ಎಷ್ಟು ತಿರುಗುತ್ತದೆ ಎನ್ನುವ ದತ್ತಾಂಶವನ್ನು ಕ್ಷಣಮಾತ್ರದಲ್ಲಿ ಮೊಬೈಲ್‌ ಆ್ಯಪ್‌ಗೆ ರವಾನೆ ಮಾಡುತ್ತದೆ.

3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

ಉಪಯೋಗವೇನು?

ಅಭ್ಯಾಸದ ವೇಳೆ ಬೌಲರ್‌ ಸ್ಮಾರ್ಟ್‌ ಬಾಲ್‌ ಬಳಸಿದರೆ ಬೌಲಿಂಗ್‌ನ ದತ್ತಾಂಶ ಮೊಬೈಲ್‌ ಇಲ್ಲವೇ ಲ್ಯಾಪ್‌ಟಾಪ್‌ನಲ್ಲಿ ಲಭ್ಯವಾಗುತ್ತದೆ. ಇದರ ಸಹಾಯದಿಂದ ಬೌಲಿಂಗ್‌ ಸುಧಾರಣೆ ಮಾಡಿಕೊಳ್ಳಲು ನೆರವಾಗುತ್ತದೆ. ಇನ್ನು ಪಂದ್ಯದ ವೇಳೆ ಸ್ಮಾರ್ಟ್‌ ಬಾಲ್‌ ಬಳಸುವುದರಿಂದ ಡಿಆರ್‌ಎಸ್‌ ನಿರ್ಧಾರಗಳನ್ನು ಪ್ರಕಟಿಸಲು ಅಂಪೈರ್‌ಗಳಿಗೆ ಸಹಕಾರಿಯಾಗಲಿದೆ. ಚೆಂಡು ಬ್ಯಾಟ್‌ಗೆ ಇಲ್ಲವೇ ನೆಲಕ್ಕೆ ತಗುಲಿದೆಯೇ, ಕ್ಷೇತ್ರರಕ್ಷಕ ಚೆಂಡನ್ನು ನೆಲಕ್ಕೆ ತಗುಲಿಸದೆ ಕ್ಯಾಚ್‌ ಹಿಡಿದಿದ್ದಾನೆಯೇ ಎನ್ನುವುದನ್ನು ಸ್ಪಷ್ಟವಾಗಿ ನೋಡಬಹುದು. ಜತೆಗೆ ಪಂದ್ಯದಲ್ಲಿ ಬೌಲರ್‌ಗಳು ತೋರುವ ಪ್ರದರ್ಶನದ ಅಂಕಿ-ಅಂಶ ತಂಡದ ವಿಡಿಯೋ ವಿಶ್ಲೇಷಕರಿಗೆ ಲಭ್ಯವಾಗಲಿದೆ. ಇದರ ಸಹಾಯದಿಂದ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲು ನೆರವಾಗಲಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 

Follow Us:
Download App:
  • android
  • ios