‘‘23ನೇ ಸಂಖ್ಯೆ ಆಗಿ ಅಭಿನಂದನೆಗಳು ಸೆರೆನಾ, ಈ ಪೈಕಿ ಕೆಲವೊಂದನ್ನು ನಾನು ನಿನ್ನೊಂದಿಗೇ ಕಳೆದುಕೊಂಡಿದ್ದೇನೆ. ಆದಾಗ್ಯೂ ನಾನು ನಿನ್ನೊಂದಿಗೇ ಇದ್ದೇನೆ’’ ಎಂದು ಸೋದರಿಯನ್ನು ಉದ್ದೇಶಿಸಿ ವೀನಸ್ ತಿಳಿಸಿದರು.
ಮೆಲ್ಬೋರ್ನ್(ಜ.28): ತೀವ್ರ ಕುತೂಹಲ ಕೆರಳಿಸಿದ್ದ ಸಹೋದರಿಯರ ಕಾದಾಟದಲ್ಲಿ ಕೊನೆಗೂ ಸೆರೆನಾ ವಿಲಿಯಮ್ಸ್ 2017ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಲ್ಲಿನ ರಾಡ್ ಲಾವರ್ ಅರೇನಾ ಕ್ರೀಡಾಂಗಣದಲ್ಲಿ ಸುಮಾರು ಒಂದು ಗಂಟೆ 21 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಎರಡನೇ ಶ್ರೇಯಾಂಕಿತೆ ಸೆರೆನಾ, 6-4, 6-4 ನೇರ ಸೆಟ್'ಗಳಿಂದ ವೀನಸ್ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ 23ನೇ ಗ್ರಾಂಡ್'ಸ್ಲಾಮ್ ಎತ್ತಿಹಿಡಿದಿದ್ದಾರೆ. ಈ ಗೆಲುವಿನ ಮೂಲಕ ಮತ್ತೊಮ್ಮೆ ಸೆರೆನಾ ನಂಬರ್ ಒನ್ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರ ಜೊತೆಗೆ ಜರ್ಮನ್ ಆಟಗಾರ್ತಿ ಸ್ಟೆಫಿಗ್ರಾಫ್ ದಾಖಲೆಯನ್ನೂ ಹಿಂದಿಕ್ಕುವಲ್ಲಿ ಸೆರೆನಾ ಯಶಸ್ವಿಯಾಗಿದ್ದಾರೆ.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ಏಳನೇ ಗರಿಮೆಗೆ ಪಾತ್ರವಾದ ಸೆರೆನಾ, ಇದರ ಬೆನ್ನಲ್ಲೇ ವೃತ್ತಿಬದುಕಿನಲ್ಲಿ 23ನೇ ಗ್ರಾಂಡ್'ಸ್ಲಾಮ್ ಗೆದ್ದು ಹೊಸದೊಂದು ದಾಖಲೆ ಬರೆದರು. ಆಧುನಿಕ ಗ್ರಾಂಡ್'ಸ್ಲಾಮ್ ಯುಗದಲ್ಲಿ ಇಂಥದ್ದೊಂದು ಅಪರೂಪದ ಸಾಧನೆ ಕೃಷ್ಣಸುಂದರಿಯಿಂದ ವ್ಯಕ್ತವಾಗಿದ್ದು, ಟೆನಿಸ್ ರಂಗದಲ್ಲಿ ಚಿರಂತನ ದಾಖಲೆ ಎನಿಸಿಕೊಂಡಿತು. ಇದೀಗ ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯಾಗಿರುವ 24 ಗ್ರಾಂಡ್'ಸ್ಲಾಮ್'ಗಳ ದಾಖಲೆಯನ್ನು ಸರಿಗಟ್ಟಲು ಕೇವಲ ಒಂದು ಹೆಜ್ಜೆಯನ್ನಷ್ಟೇ ಕ್ರಮಿಸಬೇಕಿದೆ.
‘‘23ನೇ ಸಂಖ್ಯೆ ಆಗಿ ಅಭಿನಂದನೆಗಳು ಸೆರೆನಾ, ಈ ಪೈಕಿ ಕೆಲವೊಂದನ್ನು ನಾನು ನಿನ್ನೊಂದಿಗೇ ಕಳೆದುಕೊಂಡಿದ್ದೇನೆ. ಆದಾಗ್ಯೂ ನಾನು ನಿನ್ನೊಂದಿಗೇ ಇದ್ದೇನೆ’’ ಎಂದು ಸೋದರಿಯನ್ನು ಉದ್ದೇಶಿಸಿ ವೀನಸ್ ತಿಳಿಸಿದರು.
