ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಆ ದಿನಗಳನ್ನು ನೆನಪಿಸಿಕೊಂಡ ಸಚಿನ್
ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ವೇಗಿ, ಅಪ್ಪಟ ಕನ್ನಡಿಗ, ಮೈಸೂರ್ ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಶನಿವಾರ[ಆ.31]ದಂದು 50ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ. ಪ್ರಸ್ತುತ ಐಸಿಸಿ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಾಥ್‌ಗೆ ಸಚಿನ್ ತೆಂಡುಲ್ಕರ್ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.01]: ಟೀಂ ಇಂಡಿಯಾದ ಕಂಡ ಅತ್ಯಂತ ಯಶಸ್ವಿ ಬೌಲರ್, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಶನಿವಾರ 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1969ರಲ್ಲಿ ಜನಿಸಿದ ಶ್ರೀನಾಥ್, 1991ರಿಂದ 2003ರ ವರೆಗೆ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಶ್ರೀನಾಥ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿನೂತನವಾಗಿ ಶುಭಕೋರಿದ್ದಾರೆ.
ಹೌದು, ಕೆಚ್ಚೆದೆಯ ಹೋರಾಟಗಾರ, ಒಳ್ಳೆಯ ಸ್ನೇಹಿತ, ನನ್ನೊಂದಿಗೆ ಹಲವಾರು ವರ್ಷಗಳ ಕಾಲ ಕ್ರಿಕೆಟ್ ಆಡಿದ ಅತ್ಯುತ್ತಮ ಬೌಲರ್ ಜಾವಗಲ್ ಶ್ರೀನಾಥ್’ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
ಜಾವಗಲ್ ಶ್ರೀನಾಥ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದಾರೆ. ಅದರಲ್ಲೂ 1996ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಜತೆಗೂಡಿ 9ನೇ ವಿಕೆಟ್’ಗೆ ಅಜೇಯ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯ ಭಾರತೀಯ ಹಾಗೂ ಕನ್ನಡದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.
ಜಾವಗಲ್ ಶ್ರೀನಾಥ್ ಭಾರತ ಪರ 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟಾರೆ 551 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಭಾರತ ಪರ ಏಕದಿನ ಕ್ರಿಕೆಟ್’ನಲ್ಲಿ 300 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದ ಶ್ರೀನಾಥ್, ಪ್ರಸ್ತುತ ಭಾರತ ಪರ ಗರಿಷ್ಠ ಗರಿಷ್ಠ ವಿಕೆಟ್ ಪಡೆದ[315] ಬೌಲರ್’ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಮತ್ತೋರ್ವ ಕನ್ನಡಿಗ ಅನಿಲ್ ಕುಂಬ್ಳೆ[337] ಭದ್ರವಾಗಿದ್ದಾರೆ. ಇನ್ನು ಮೈಸೂರ್ ಎಕ್ಸ್‌ಪ್ರೆಸ್ ಖ್ಯಾತಿಯ ಶ್ರೀನಾಥ್ ಒಟ್ಟು ನಾಲ್ಕು[1992, 1996,1999 ಹಾಗೂ 2003] ವಿಶ್ವಕಪ್ ಪ್ರತಿನಿಧಿಸಿದ್ದು, ಜಹೀರ್ ಖಾನ್ ಜತೆ[44] ಭಾರತ ಪರ ಜಂಟಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆಯನ್ನು ಬರೆದಿದ್ದಾರೆ.