ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿ ಮನವಿಗೆ ಹಲವು ಸ್ಟಾರ್ ಕ್ರಿಕೆಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬಳಿಕ ಇದೀಗ ಸಚಿನ್ ತೆಂಡೂಲ್ಕರ್ ಹಾಗೂ ಶಿಖರ್ ಧವನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಅಭಿಮಾನಿಗಳಲ್ಲಿ ಪಂದ್ಯ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.
ಮುಂಬೈ(ಜೂನ್.4): ಭಾರತೀಯ ಫುಟ್ಬಾಲ್ ತಂಡಕ್ಕೆ ಬೆಂಬಲ ನೀಡುವಂತೆ ನಾಯಕ ಸುನಿಲ್ ಚೆಟ್ರಿ ಮಾಡಿದ ಮನವಿಗೆ ಇದೀಗ ಅಪರಾ ಬೆಂಬಲ ವ್ಯಕ್ತವಾಗಿದೆ. ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಚೆಟ್ರಿ ನೆರವಿಗೆ ಧಾವಿಸಿದ್ದಾರೆ.
ಭಾರತ, ಚೈನೀಸ್ ತೈಪೆ, ಕೀನ್ಯಾ ಹಾಗೂ ನ್ಯೂಜಿಲೆಂಡ್ ನಡುವಿನ ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಆದರೆ ಮೊದಲ ಪಂದ್ಯದದಲ್ಲಿ ಕ್ರೀಡಾಂಗಣ ಅಭಿಮಾನಿಗಳಿಲ್ಲದೆ ಖಾಲಿಯಾಗಿತ್ತು. ಹೀಗಾಗಿ ಪಂದ್ಯದ ಬಳಿಕ ಚೆಟ್ರಿ ಫುಟ್ಬಾಲ್ ತಂಡಕ್ಕೆ ಬೆಂಬಲ ನೀಡುವಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು.
ಆತ್ಮೀಯ ಸ್ನೇಹಿತನಿಗಾಗಿ ಕೊಹ್ಲಿ ಕ್ರೀಡಾಭಿಮಾನಿಗಳಲ್ಲಿ ಮಾಡಿದ ಮನವಿಯೇನು?
ಸುನಿಲ್ ಚೆಟ್ರಿ ಮನವಿಗೆ ನಾಯಕ ವಿರಾಟ್ ಕೊಹ್ಲಿ ಸ್ಪಂದಿಸಿದ್ದರು. ಕೊಹ್ಲಿ ಕೂಡ ವೀಡಿಯೋ ಮೂಲಕ ಅಭಿಮಾನಿಗಳಿಗೆ ಕರೆ ನೀಡಿದ್ದರು. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಭಾರತ ತಂಡ ಯಾವಾಗ, ಎಲ್ಲೇ ಆಡಿದರೂ ಕ್ರೀಡಾಂಗಣಕ್ಕೆ ತೆರಳಿ ಆಟಗಾರರನ್ನ ಹುರಿದುಂಬಿಸೋಣ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ಮಾತ್ರವಲ್ಲ, ಟೀಮ್ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ಚೆಟ್ರಿಗೆ ಬೆಂಬಲ ನೀಡುವಂತೆ ಟ್ವೀಟ್ ಮಾಡಿದ್ದಾರೆ. ಸುನಿಲ್ ಚೆಟ್ರಿ ಸಾಧನೆಯನ್ನ ಟ್ವೀಟ್ ಮಾಡಿರುವ ಧವನ್, ಮುಂದಿನ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಲು ಮನವಿ ಮಾಡಿದ್ದಾರೆ.
ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ, ಚೈನೀಸ್ ತೈಪೆ ವಿರುದ್ಧ ಹೋರಾಟ ನಡೆಸಿತ್ತು. ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತ 5-0 ಅಂತರದಲ್ಲಿ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಗೆಲುವಿನ ಬಳಿಕ ಚೆಟ್ರಿ ಅಭಿಮಾನಿಗಳಲ್ಲಿ ಫುಟ್ಬಾಲ್ ತಂಡವನ್ನ ಬೆಂಬಲಿಸುವಂತೆ ಮನವಿ ಮಾಡಿದ್ದರು.
