ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಮಾತ್ರ ಖಾಲಿಯಾಗಿತ್ತು. ಹೀಗಾಗಿ ಸುನಿಲ್ ಚೆಟ್ರಿ ತಂಡವನ್ನ ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಧನಿಗೂಡಿಸಿದ್ದಾರೆ.
ದೆಹಲಿ(ಜೂನ್.3): ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತರ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಇದೀಗ ತನ್ನ ಆತ್ಮೀಯ ಸ್ನೇಹಿತ, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಮನವಿಗೆ ಕೊಹ್ಲಿ ಕೂಡ ಧನಿಗೂಡಿಸಿದ್ದಾರೆ.
ಭಾರತೀಯ ಫುಟ್ಬಾಲ್ ತಂಡಕ್ಕೆ ಅಭಿಮಾನಿಗಳು ಬೆಂಬಲ ನೀಡಬೇಕೆಂದು ಸುನಿಲ್ ಚೆಟ್ರಿ ಮನವಿ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ತೆರಳಿ ಭಾರತದ ಫುಟ್ಬಾಲ್ ತಂಡವನ್ನ ಬೆಂಬಲಿಸಬೇಕು ಎಂದು ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ಮೂಲಕ ಮನವಿ ಮಾಡಿದ್ದಾರೆ.
ಭಾರತದದಲ್ಲಿ ಕ್ರೀಡಾ ಸಂಸ್ಕೃತಿಯನ್ನ ಬೆಳೆಸಲು ಎಲ್ಲರು ಕೈಜೋಡಿಸಬೇಕು. ಫುಟ್ಬಾಲ್ ಜೊತೆಗೆ ಇತರ ಎಲ್ಲಾ ಕ್ರೀಡೆಗಳಿಗೂ ಬೆಂಬಲ ನೀಡಬೇಕು. ಈ ಮೂಲಕ ಭಾರತವನ್ನ ಬಲಿಷ್ಠ ಕ್ರೀಡಾ ರಾಷ್ಟ್ರವಾಗಿ ಮಾಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ. ಕ್ರೀಡಾಂಗಣಕ್ಕೆ ತೆರಳಿ ಪಂದ್ಯವನ್ನ ವೀಕ್ಷಿಸೋ ಮೂಲಕ ಕ್ರೀಡೆಗೆ ಬೆಂಬಲ ನೀಡಿ ಎಂದು ಕೊಹ್ಲಿ ಸಂದೇಶ ರವಾನಿಸಿದ್ದಾರೆ.
ಮುಂಬೈನಲ್ಲಿ ಜೂನ್ 1 ರಂದು ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಚೈನೀಸ್ ತೈಪೆ ವಿರುದ್ಧ 5-0 ಅಂತರದಿಂದ ಗೆಲುುವು ಸಾಧಿಸಿತ್ತು. ಈ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಆದರೆ ಈ ರೋಚಕ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಕೇವಲ 2569 ಮಂದಿ ಹಾಜರಿದ್ದರು. ಇಡೀ ಕ್ರೀಡಾಂಗಣ ಖಾಲಿಯಾಗಿತ್ತು. ಹೀಗಾಗಿ ಪಂದ್ಯದ ಬಳಿಕ ಸುನಿಲ್ ಚೆಟ್ರಿ, ಬೆಂಬಲಕ್ಕಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಟ್ವಿಟರ್‌ನಲ್ಲಿ ವೀಡಿಯೋ ಮೂಲಕ ಮನವಿ ಮಾಡಿದ್ದ ಚೆಟ್ರಿ, ಕ್ರೀಡಾಂಗಣಕ್ಕೆ ಬಂದು ತಂಡವನ್ನ ಹುರಿದುಂಬಿಸುವಂತೆ ಮನವಿ ಮಾಡಿದ್ದರು.
