ದುಬೈ[ಜು.19]: ಟೀಂ ಇಂಡಿಯಾ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ. ಈ ಮೂಲಕ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದ ಭಾರತದ ಆರನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಸಚಿನ್ ತೆಂಡುಲ್ಕರ್ ಪಾತ್ರರಾಗಿದ್ದಾರೆ.

ರಾಹುಲ್ ದ್ರಾವಿಡ್‌ಗೆ ಅತ್ಯುನ್ನತ ಐಸಿಸಿ ಹಾಲ್ ಆಫ್ ಫೇಮ್ ಗೌರವ!

ಸಚಿನ ತೆಂಡುಲ್ಕರ್ ಜತೆಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಲನ್ ಡೊನಾಲ್ಡ್ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಆಟಗಾರ್ತಿ ಕ್ಯಾಥರಿನ್ ಫಿಟ್ಜ್’ಪ್ಯಾಟ್ರಿಕ್ ಕೂಡಾ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ.
ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಚಿನ್, ಇದು ನನಗೆ ಸಿಗುತ್ತಿರುವ ಅತಿದೊಡ್ಡ ಗೌರವವಾಗಿದೆ ಎಂದು ಹೇಳಿದ್ದಾರೆ.

46 ವರ್ಷದ ಸಚಿನ್ ತೆಂಡುಲ್ಕರ್, ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 34,357 ರನ್ ಬಾರಿಸಿದ್ದಾರೆ. ಜತೆಗೆ 100 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್’ಮನ್ ಸೇರಿದಂತೆ ಹತ್ತು ಹಲವು ದಾಖಲೆಗಳು ತೆಂಡುಲ್ಕರ್ ಹೆಸರಿನಲ್ಲಿವೆ.    

ಈ ಮೊದಲು ಭಾರತದ ಬಿಷನ್ ಸಿಂಗ್ ಬೇಡಿ[2009], ಸುನಿಲ್ ಗವಾಸ್ಕರ್[2009], ಕಪಿಲ್ ದೇವ್[2009], ಅನಿಲ್ ಕುಂಬ್ಳೆ[2015] ಹಾಗೂ ರಾಹುಲ್ ದ್ರಾವಿಡ್[2018] ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.   

ಇನ್ನು 52 ಅಲನ್ ಡೊನಾಲ್ಡ್, ದಕ್ಷಿಣ ಆಫ್ರಿಕಾ ತಂಡ ಕ್ರಿಕೆಟ್ ಜಗತ್ತಿಗೆ ನೀಡಿದ ಅದ್ಭುತ ವೇಗಿಗಳಲ್ಲಿ ಒಬ್ಬರು ಎನಿಸಿದ್ದಾರೆ. 330 ಟೆಸ್ಟ್ ಹಾಗೂ 272 ಏಕದಿನ ವಿಕೆಟ್ ಕಬಳಿಸುವಲ್ಲಿ ಡೊನಾಲ್ಡ್ ಯಶಸ್ವಿಯಾಗಿದ್ದರು.
 
ಕ್ಯಾಥರಿನ್ ಫಿಟ್ಜ್’ಪ್ಯಾಟ್ರಿಕ್ ಏಕದಿನ ಕ್ರಿಕೆಟ್’ನಲ್ಲಿ 180, ಟೆಸ್ಟ್ ಕ್ರಿಕೆಟ್’ನಲ್ಲಿ 60 ವಿಕೆಟ್ ಕಬಳಿಸುವ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ವಿಕೆಟ್ ಪಡೆದ ಎರಡನೇ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಅಲ್ಲದೇ ಕೋಚ್ ಆಗಿಯೂ ಯಶಸ್ವಿಯಾಗಿರುವ ಕ್ಯಾಥರಿನ್ ಫಿಟ್ಜ್’ಪ್ಯಾಟ್ರಿಕ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಮೂರು ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.