ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ 372 ರನ್‌ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಸೆಮಿಫೈಲನ್‌ಗೆ ಲಗ್ಗೆ ಇಟ್ಟಿದೆ. ಇದೀಗ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಸೆಮೀಸ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿಯಾಗಿ ಸೌರಾಷ್ಟ್ರ ಕಣಕ್ಕಿಳಿಯಲಿದೆ. ಸೌರಾಷ್ಟ್ರ ತಂಡದ ದಾಖಲೆ ಗೆಲುವಿನ ಹೈಲೈಟ್ಸ್ ಇಲ್ಲಿದೆ.

ನಾಗ್ಪುರ(ಜ.20): 2018-19ರ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಸೌರಾಷ್ಟ್ರ ಹಾಗೂ ಹಾಲಿ ಚಾಂಪಿಯನ್‌ ವಿದರ್ಭ ತಂಡಗಳು ಪ್ರವೇಶಿಸಿವೆ. ಲಖನೌನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ದಾಖಲೆಯ 372 ರನ್‌ ಗುರಿ ಬೆನ್ನಟ್ಟಿದ ಸೌರಾಷ್ಟ್ರ, 6 ವಿಕೆಟ್‌ ಗೆಲುವು ಸಾಧಿಸಿತು. ಸೌರಾಷ್ಟ್ರ ಅಂತಿಮ 4ರ ಸುತ್ತಿನಲ್ಲಿ ಕರ್ನಾಟಕವನ್ನು ಎದುರಿಸಲಿದೆ. ನಾಗ್ಪುರದಲ್ಲಿ ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್‌ ಹಾಗೂ 115 ರನ್‌ಗಳ ಗೆಲುವು ಪಡೆದ ವಿದರ್ಭ, ಸೆಮೀಸ್‌ನಲ್ಲಿ ಕೇರಳ ವಿರುದ್ಧ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಪ್ಲೇಯರ್ಸ್ ಲಾಂಜ್‌ಗೆ ತೆರಳಲು ಫೆಡರರ್‌ಗೆ ಪ್ರವೇಶ ನಿರಾಕರಣೆ-ಮುಂದೇನಾಯ್ತು?

ಸೌರಾಷ್ಟ್ರ ಅಮೋಘ ಬ್ಯಾಟಿಂಗ್‌: ಹಾರ್ವಿಕ್‌ ದೇಸಾಯಿಯ ಚೊಚ್ಚಲ ಶತಕ, ಚೇತೇಶ್ವರ್‌ ಪೂಜಾರ (ಅಜೇಯ 67) ಹಾಗೂ ಶೆಲ್ಡನ್‌ ಜಾಕ್ಸನ್‌ (ಅಜೇಯ 73) ರನ್‌ ಹೋರಾಟದ ನೆರವಿನಿಂದ ಕೇವಲ 4 ವಿಕೆಟ್‌ ಕಳೆದುಕೊಂಡು 115.1 ಓವರ್‌ಗಳಲ್ಲಿ ಗುರಿ ತಲುಪಿದ ಸೌರಾಷ್ಟ್ರ, 2008-09ರ ಋುತುವಿನಲ್ಲಿ ಸವೀರ್‍ಸಸ್‌ ವಿರುದ್ಧ ಅಸ್ಸಾಂ 371 ರನ್‌ ಗುರಿ ಬೆನ್ನಟ್ಟಿನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು. ರಣಜಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ರನ್‌ ಗುರಿ ಬೆನ್ನಟ್ಟಿದ ದಾಖಲೆ ಸೌರಾಷ್ಟ್ರ ಪಾಲಾಯಿತು.

2 ವಿಕೆಟ್‌ಗೆ 195 ರನ್‌ಗಳಿಂದ 5ನೇ ಹಾಗೂ ಅಂತಿಮ ದಿನದಾಟವನ್ನು ಆರಂಭಿಸಿದ ಸೌರಾಷ್ಟ್ರ, ಇನ್ನೂ 177 ರನ್‌ ಹಿಂದಿತ್ತು. ದೇಸಾಯಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ರಾತ್ರಿ ಕಾವಲುಗಾರ ಕಮ್ಲೇಶ್‌ ಮಕ್ವಾನಾ (07) ಔಟಾಗಿದ್ದು ಸೌರಾಷ್ಟ್ರಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ. ಹಾರ್ವಿಕ್‌ ಆಕ್ರಮಣಕಾರಿ ಆಟ ಮುಂದುವರಿಸಿದರು.

ಇದನ್ನೂ ಓದಿ: ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಹಾರ್ವಿಕ್‌, 259 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 116 ರನ್‌ ಗಳಿಸಿ ಔಟಾದರು. 19 ವರ್ಷದ ವಿಕೆಟ್‌ ಕೀಪರ್‌ ಔಟಾದಾಗ ತಂಡದ ಗೆಲುವಿಗೆ ಇನ್ನೂ 136 ರನ್‌ಗಳ ಅವಶ್ಯಕತೆ ಇತ್ತು. ಉತ್ತರ ಪ್ರದೇಶ ಪಂದ್ಯದ ಮೇಲೆ ಹಿಡಿತ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ಇದಕ್ಕೆ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್‌ ಪೂಜಾರ ಹಾಗೂ ಶೆಲ್ಡನ್‌ ಜಾಕ್ಸನ್‌ ಅವಕಾಶ ನೀಡಲಿಲ್ಲ. ದ್ವಿತೀಯಾರ್ಧ ಆರಂಭಗೊಂಡು ಒಂದು ಗಂಟೆಯೊಳಗೆ ಸೌರಾಷ್ಟ್ರ ಗೆಲುವಿನ ದಡ ಮುಟ್ಟಿತು.

ಸ್ಕೋರ್‌: ಉತ್ತರ ಪ್ರದೇಶ 385 ಹಾಗೂ 194, ಸೌರಾಷ್ಟ್ರ 208 ಹಾಗೂ 372/4 (ಹಾರ್ವಿಕ್‌ 116, ಶೆಲ್ಡನ್‌ 73*, ಪೂಜಾರ 67*)

ಇದನ್ನೂ ಓದಿ: ಅನುಚಿತ ವರ್ತನೆ ತೋರಿದ ಮುಂಬೈ ಕ್ರಿಕೆಟಿಗನಿಗೆ 3 ವರ್ಷ ನಿಷೇಧ!

ಬೆಂಗಳೂರು ಆತಿಥ್ಯ: ಶುಕ್ರವಾರ ರಾಜಸ್ಥಾನವನ್ನು ಸೋಲಿಸಿ ಸೆಮೀಸ್‌ಗೇರಿದ್ದ ಕರ್ನಾಟಕ, ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್‌ ಪಂದ್ಯವನ್ನು ತವರು ಮೈದಾನದಲ್ಲಿ ಆಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.24ರಿಂದ ಪಂದ್ಯ ಆರಂಭಗೊಳ್ಳಲಿದ್ದು, ನೇರ ಪ್ರಸಾರವಾಗಲಿದೆ. ಲೀಗ್‌ ಹಂತದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಸೋಲುಂಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಂಡು ಫೈನಲ್‌ಗೇರುವುದು ಕರ್ನಾಟಕದ ಗುರಿಯಾಗಿದೆ.

ವಿದರ್ಭಕ್ಕೆ ಇನ್ನಿಂಗ್ಸ್‌ ಗೆಲುವು
ಕ್ರಿಕೆಟ್‌ ಶಿಶು ಉತ್ತರಾಖಂಡವನ್ನು ಹಾಲಿ ಚಾಂಪಿಯನ್‌ ವಿದರ್ಭ ಇನ್ನಿಂಗ್ಸ್‌ ಹಾಗೂ 115 ರನ್‌ಗಳಿಂದ ಸೋಲಿಸಿತು. ಶನಿವಾರ ಭಾರತ ತಂಡದ ವೇಗಿ ಉಮೇಶ್‌ ಯಾದವ್‌ (5/23) ಹಾಗೂ ಎಡಗೈ ಬೌಲರ್‌ ಆದಿತ್ಯ ಸರ್ವಾಟೆ (5/55) ದಾಳಿಗೆ ನಲುಗಿದ ಉತ್ತರಾಖಂಡ ಕೇವಲ 159 ರನ್‌ಗೆ ಆಲೌಟ್‌ ಆಯಿತು.

274 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ್ದ ಉತ್ತರಾಖಂಡ, 4ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. 5ನೇ ಹಾಗೂ ಅಂತಿಮ ದಿನವಾದ ಶನಿವಾರ, ಕೇವಲ 7 ರನ್‌ಗೆ ಕೊನೆ 5 ವಿಕೆಟ್‌ ಕಳೆದುಕೊಂಡ ಉತ್ತರಾಖಂಡ ಹೀನಾಯ ಸೋಲಿಗೆ ಶರಣಾಯಿತು. ಉಮೇಶ್‌ ಯಾದವ್‌ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಕಬಳಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜ.24ರಿಂದ ಆರಂಭಗೊಳ್ಳಲಿರುವ ವಿದರ್ಭ ಹಾಗೂ ಕೇರಳ ನಡುವಿನ ಸೆಮಿಫೈನಲ್‌ ಪಂದ್ಯಕ್ಕೆ ವೈನಾಡ್‌ ಆತಿಥ್ಯ ವಹಿಸಲಿದೆ.

ಸ್ಕೋರ್‌: ಉತ್ತರಾಖಂಡ 355 ಹಾಗೂ 159 (ಕಣ್‌ವೀರ್‌ 76, ಅನಿವಾಶ್‌ 28, ಉಮೇಶ್‌ 5/23, ಆದಿತ್ಯ 5/55), ವಿದರ್ಭ 629