ಫೆಡರರ್ 18ನೇ ಗ್ರಾಂಡ್‌'ಸ್ಲಾಮ್ ಪ್ರಶಸ್ತಿಗಾಗಿ ಕಾದಾಡಲಿದ್ದರೆ, ನಡಾಲ್ 15ನೇ ಮೇಜರ್ ಪ್ರಶಸ್ತಿಗಾಗಿ ಸಜ್ಜಾಗಿದ್ದಾರೆ.
ಮೆಲ್ಬೋರ್ನ್(ಜ.27): ಸಹಜವಾಗಿಯೇ ಅತೀವ ಉದ್ವೇಗಕ್ಕೆ ಎಡೆಮಾಡಿಕೊಟ್ಟಿದ್ದ ಸರಿ ಸುಮಾರು ಐದು ತಾಸುಗಳ ಸುದೀರ್ಘ ಸೆಣಸಾಟದಲ್ಲಿ ಸ್ಥಿಮಿತತೆ ಕಳೆದುಕೊಳ್ಳದೆ ಸ್ಥಿರ ಪ್ರದರ್ಶನ ನೀಡಿದ ಸ್ಪೇನ್ ಟೆನಿಸಿಗ ರಾಫೇಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ಗೆ ಲಗ್ಗೆ ಹಾಕಿ ನಿಡುಸುಯ್ದಿದ್ದಾರೆ.
ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸೆಮಿಫೈನಲ್ ಸೆಣಸಿನಲ್ಲಿ 9ನೇ ಶ್ರೇಯಾಂಕಿತ ನಡಾಲ್, ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 6-3, 5-7, 7-6 (7/5), 6-7 (4/7) ಮತ್ತು 6-4ರ ಐದು ಸೆಟ್'ಗಳ ಆಟದಲ್ಲಿ ಗೆಲುವು ಸಾಧಿಸಿದರು. ಇದೀಗ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಅವರು ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಸವಾಲನ್ನು ಎದುರಿಸಲಿದ್ದಾರೆ.
ಫೆಡರರ್ 18ನೇ ಗ್ರಾಂಡ್'ಸ್ಲಾಮ್ ಪ್ರಶಸ್ತಿಗಾಗಿ ಕಾದಾಡಲಿದ್ದರೆ, ನಡಾಲ್ 15ನೇ ಮೇಜರ್ ಪ್ರಶಸ್ತಿಗಾಗಿ ಸಜ್ಜಾಗಿದ್ದಾರೆ. ಅಂತೆಯೇ ಮೆಲ್ಬೋರ್ನ್ನಲ್ಲಿ ಐದನೇ ಪ್ರಶಸ್ತಿಯನ್ನು ಫೆಡರರ್ ಎದುರುನೋಡುತ್ತಿದ್ದರೆ, ನಡಾಲ್ ಎರಡನೇ ಪ್ರಶಸ್ತಿಗಾಗಿ ಮುಗಿಬಿದ್ದಿದ್ದಾರೆ.
ಡ್ರೀಮ್ ಫೈನಲ್
2008ರ ವಿಂಬಲ್ಡನ್ ಫೈನಲ್'ನಲ್ಲಿ ಮಹಿಳೆಯರ ವಿಭಾಗದಲ್ಲಿ ವಿಲಿಯಮ್ಸ್ ಸೋದರಿಯರು ಪ್ರಶಸ್ತಿಗಾಗಿ ಕಾದಾಡಿದ್ದರೆ, ಪುರುಷರ ಸಿಂಗಲ್ಸ್ನಲ್ಲಿ ನಡಾಲ್ ಮತ್ತು ಫೆಡರರ್ ಮುಖಾಮುಖಿಯಾಗಿದ್ದರು. ಆಗ ವೀನಸ್ ಮತ್ತು ನಡಾಲ್ ಜಯದ ನಗೆಬೀರಿದ್ದರು. ಇದೀಗ 9 ವರ್ಷಗಳ ಬಳಿಕ ವಿಶ್ವ ಟೆನಿಸ್ ಮತ್ತೊಂದು ಮಹತ್ವನೀಯರ ಕಾದಾಟಕ್ಕೆ ಸಾಕ್ಷಿಯಾಗಲಿದ್ದು, ಈ ಬಾರಿಯ ವಿಜೇತರು ಯಾರು ಎಂಬುದಷ್ಟೇ ಸದ್ಯದ ಕೌತುಕ. ಇನ್ನು 2002ರ ಯುಎಸ್ ಓಪನ್'ನಲ್ಲಿ ಪೀಟ್ ಸಾಂಪ್ರಾಸ್ ಮತ್ತು ಆಂಡ್ರೆ ಅಗಾಸ್ಸಿ ನಂತರ 30 ವರ್ಷ ಮೀರಿದ ಇಬ್ಬರು ಆಟಗಾರರು ಫೈನಲ್'ನಲ್ಲಿ ಸೆಣಸುತ್ತಿರುವುದು ಇದೇ ಮೊದಲು.
