ಜೈಪುರ[ಮೇ.08]: ಆರಂಭ ಶೂರತ್ವ ತೋರಿ, ಸದ್ಯ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಕುಸಿದಿರುವ ರಾಜಸ್ಥಾನ ರಾಯಲ್ಸ್ ತವರಿನಲ್ಲಿಂದು ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲನ್ನು ಎದುರಿಸಲಿದ್ದು, ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. 
ಭಾನುವಾರವಷ್ಟೇ ಇಂದೋರ್‌'ನಲ್ಲಿ ಮುಖಾಮುಖಿಯಾಗಿದ್ದ ತಂಡಗಳು, 2 ದಿನಗಳ ಅಂತರದಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ಸತತ 3 ಸೋಲು ಕಂಡು ಕುಗ್ಗಿರುವ ರಾಜಸ್ಥಾನದ ಆಟ ಎಲ್ಲಾ ವಿಭಾಗಗಳಲ್ಲೂ ಸುಧಾರಿಸಬೇಕಿದೆ. 3ನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪ್ರತಿ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಅಜಿಂಕ್ಯ ರಹಾನೆ ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಸವಾಲು ಎದುರಾಗಲಿದೆ.
ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ರಾಜಸ್ಥಾನದ ಯಾವ ಯೋಜನೆಗಳೂ ಕೈಹಿಡಿಯುತ್ತಿಲ್ಲ. ಟಿ20 ತಜ್ಞರ ದಂಡನ್ನೇ ಹೊಂದಿದ್ದರೂ ರಾಯಲ್ಸ್ ಪಾತಳಕ್ಕೆ ಕುಸಿದಿದೆ. ತಂಡ ಉಳಿದಿರುವ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲುವುದರೊಂದಿಗೆ, ಉಳಿದ ತಂಡಗಳ ಫಲಿತಾಂಶವೂ ತನ್ನ ಪರವಾಗಿ ಬರುವಂತೆ ಪ್ರಾರ್ಥಿಸಬೇಕಿದೆ. ಆಗಷ್ಟೇ ಪ್ಲೇ-ಆಫ್ ಪ್ರವೇಶಿಲು ಸಾಧ್ಯ.
ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಈ ಪಂದ್ಯದಲ್ಲಿ ಗೆದ್ದರೆ, ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ತಂಡಕ್ಕೆ 2ನೇ ಸ್ಥಾನಕ್ಕೇರುವ ಅವಕಾಶ ಸಹ ಇದೆ. ಕುಗ್ಗಿರುವ ರಾಯಲ್ಸ್ ಎದುರು ಸಿಡಿದೆದ್ದು, ನೆಟ್ ರನ್‌'ರೇಟ್ ಉತ್ತಮ ಗೊಳಿಸಿಕೊಳ್ಳುವ ಲೆಕ್ಕಾಚಾರ ಸಹ ತಂಡದ್ದಾಗಿದೆ. 
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ ಸ್ಥಳ: ಜೈಪುರ