ಪ್ರತಿ ಎಸೆತವನ್ನು ಬೇರೆ-ಬೇರೆ ರೀತಿ ಹಾಕಿದರೂ ಅನಾಯಾಸವಾಗಿ ಬೌಂಡರಿ ಬಾರಿಸುವ ಮೂಲಕ ನನ್ನನ್ನು ವೀರೂ ತಬ್ಬಿಬ್ಬು ಮಾಡಿದ್ದರು ಎಂದು ಚೆನ್ನೈ ಸ್ಪಿನ್ನರ್ ಬಹುದಿನದ ಗುಟ್ಟೊಂದನ್ನು ಹೊರಗೆಡುವಿದ್ದಾರೆ.
ನವದೆಹಲಿ(ಜೂ.07): ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ವಿರೇಂದ್ರ ಸೆಹ್ವಾಗ್ ಬೆಚ್ಚಿಬೀಳಿಸಿದ ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ಹೌದು ಒಮ್ಮೆ ಅಶ್ವಿನ್ ನೆಟ್'ನಲ್ಲಿ ಬೌಲಿಂಗ್ ಮಾಡುವ ವೇಳೆ ಸೆಹ್ವಾಗ್ ತಮ್ಮ ಆತ್ಮಸ್ಥೈರ್ಯಗೆಡಿಸಿದ್ದರು ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ವಾಟ್ ದ ಡಕ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಶ್ವಿನ್, ಶ್ರೀಲಂಕಾ ಪ್ರವಾಸವೊಂದರಲ್ಲಿ ಅಭ್ಯಾಸದ ವೇಳೆ ಸೆಹ್ವಾಗ್ ತಾವು ಬೌಲ್ ಮಾಡಿದ ಎಲ್ಲಾ ಎಸೆತಗಳನ್ನೂ ಬೌಂಡರಿ ಬಾರಿಸುತ್ತಿದ್ದರು ಎಂದಿದ್ದಾರೆ.
ಪ್ರತಿ ಎಸೆತವನ್ನು ಬೇರೆ-ಬೇರೆ ರೀತಿ ಹಾಕಿದರೂ ಅನಾಯಾಸವಾಗಿ ಬೌಂಡರಿ ಬಾರಿಸುವ ಮೂಲಕ ನನ್ನನ್ನು ವೀರೂ ತಬ್ಬಿಬ್ಬು ಮಾಡಿದ್ದರು ಎಂದು ಚೆನ್ನೈ ಸ್ಪಿನ್ನರ್ ಬಹುದಿನದ ಗುಟ್ಟೊಂದನ್ನು ಹೊರಗೆಡುವಿದ್ದಾರೆ.
ಒಂದುವೇಳೆ ಸಚಿನ್ ಇಲ್ಲವೇ ಧೋನಿ ಬಳಿ ಸಲಹೆ ಕೇಳಿದ್ದರೆ, ರಚನಾತ್ಮಕ ಸಲಹೆ ನೀಡುತ್ತಿದ್ದರು, ಆದರೆ ವೀರೂ ಮಾತ್ರ ಹೇಳಿದ್ದು ಹೀಗೆ ಎಂದಿದ್ದಾರೆ.
‘ಅಭ್ಯಾಸದ ಬಳಿಕ ನಾನು ವೀರೂ ಬಳಿ ಕೇಳಿದೆ, ಬೌಲಿಂಗ್'ನಲ್ಲಿ ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು. ಅದಕ್ಕೆ ಅವರು ಆಫ್ ಸ್ಪಿನ್ನರ್'ಗಳನ್ನು ನಾನು ಬೌಲರ್'ಗಳೆಂದೇ ಪರಿಗಣಿಸುವುದಿಲ್ಲ ಎಂದು ನನ್ನ ಆತ್ಮಸ್ಥೈರ್ಯ ಕುಗ್ಗಿಸಿದ್ದರು' ಎಂದು ಹೇಳಿದ್ದಾರೆ.