ನಮ್ಮ ನೆಲದಲ್ಲಿ ಭಾರತವನ್ನು ಮಣಿಸಿದೆವಾದರೂ, ಭಾರತ ಪ್ರವಾಸ ಮಾತ್ರ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ ಆಸೀಸ್ ಪರ ಎರಡು ವಿಶ್ವಕಪ್ ಗೆದ್ದುಕೊಟ್ಟ ಪಾಂಟಿಂಗ್ ಹೇಳಿದ್ದಾರೆ.

ಮೆಲ್ಬೋರ್ನ್(ಜ.27): ಮುಂಬರುವ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ತವರಿನ ತಂಡವನ್ನು ಮಾಜಿ ನಾಯಕ ರಿಕಿ ಪಾಂಟಿಂಗ್ ಎಚ್ಚರಿಸಿದ್ದಾರೆ.

‘‘ಮುಂದಿನ ತಿಂಗಳು ಸ್ಟೀವ್ ಸ್ಮಿತ್ ಬಳಗ ಭಾರತ ಪ್ರವಾಸ ಕೈಗೊಳ್ಳುತ್ತದೆ. ಕಳೆದ ಬಾರಿ 4-0ಯಿಂದ ನಮ್ಮ ನೆಲದಲ್ಲಿ ಭಾರತವನ್ನು ಮಣಿಸಿದೆವಾದರೂ, ಭಾರತ ಪ್ರವಾಸ ಮಾತ್ರ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ ಆಸೀಸ್ ಪರ ಎರಡು ವಿಶ್ವಕಪ್ ಗೆದ್ದುಕೊಟ್ಟ ಪಾಂಟಿಂಗ್ ಹೇಳಿದ್ದಾರೆ.

ಭಾರತ ಪ್ರವಾಸ ಪ್ರತಿಯೊಂದು ತಂಡಕ್ಕೂ ಕಠಿಣ ಸವಾಲೇ ಸರಿ. ಆರಂಭದಲ್ಲಿ ಬ್ಯಾಟಿಂಗ್ ಸ್ನೇಹಿಯಾದರೂ ನಂತರದ ದಿನಗಳಲ್ಲಿ ಪಿಚ್ ತಿರುವು ಪಡೆದುಕೊಳ್ಳಲಿದೆ. ಇದು ಯುವ ಕ್ರಿಕೆಟಿಗರಿಗೆ ಸತ್ವ ಪರೀಕ್ಷೆಯಾಗಲಿದೆ ಎಂದು ಪಂಟರ್ ತಿಳಿಸಿದ್ದಾರೆ.

ಮುಖ್ಯವಾಗಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಲಂಕಾ ಪ್ರವಾಸ ಕೈಗೊಂಡಿದ್ದ ಆಸೀಸ್ 0-3ರಿಂದ ಕ್ಲೀನ್‌'ಸ್ವೀಪ್ ಮುಖಭಂಗಕ್ಕೆ ಗುರಿಯಾಗಿತ್ತು. ಹೆಚ್ಚೂ ಕಮ್ಮಿ ಭಾರತದ ಪಿಚ್ ಕೂಡ ಲಂಕಾದ ಪಿಚ್‌'ನಂತೆಯೇ ಇರುವ ಹಿನ್ನೆಲೆಯಲ್ಲಿ ಸ್ಮಿತ್ ಬಳಗ ಭಾರೀ ಸವಾಲನ್ನೆದುರಿಸಬೇಕಿದೆ’’ ಎಂದು ಪಾಂಟಿಂಗ್ ಮುನ್ನೆಚ್ಚರಿಸಿದ್ದಾರೆ.