Pro Kabaddi League : ಬೆಂಗಳೂರು ಬುಲ್ಸ್ ಗೆ ನಿರಾಸೆ, ಪಟನಾ-ದೆಹಲಿ ಪ್ರಶಸ್ತಿ ಕಾದಾಟ!
ಸೆಮಿಫೈನಲ್ ನಲ್ಲಿ ಸೋಲು ಕಂಡ ಬೆಂಗಳೂರು ಬುಲ್ಸ್
ದಿನದ ಮೊದಲ ಸೆಮಿಫೈನಲ್ ನಲ್ಲಿ ಯುಪಿ ಯೋಧಾ ವಿರುದ್ಧ ಗೆದ್ದ ಪಟನಾ
ಶುಕ್ರವಾರ ನಡೆಯಲಿದೆ ಫೈನಲ್ ಕದನ
ಬೆಂಗಳೂರು (ಫೆ.23): ಅಚ್ಚರಿಯ ರೀತಿಯಲ್ಲಿ ಪ್ಲೇ ಆಫ್ ಗೇರುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು ಬುಲ್ಸ್ (Bengaluru Bulls) ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಸೆಮಿಫೈನಲ್ ನಲ್ಲಿಯೇ ನಿರಾಸೆ ಕಂಡಿದೆ. ಬುಧವಾರ ನಡೆದ ಉಪಾಂತ್ಯ ಹೋರಾಟದಲ್ಲಿ ಬೆಂಗಳೂರು ಬುಲ್ಸ್ 35-40 ಅಂತರದಿಂದ ದಬಾಂಗ್ ದೆಹಲಿ (Dabang Delhi ) ತಂಡಕ್ಕೆ ಶರಣಾಯಿತು. ಮೊದಲ ಅವಧಿಯ ಆಟದಲ್ಲಿ ಕೇವಲ 1 ಅಂಕದ ಮುನ್ನಡೆ ಗಳಿಸಿಕೊಂಡಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ 2ನೇ ಅವಧಿಯ ಆಟದಲ್ಲಿ ದೆಹಲಿ ತಂಡದ ಅಗ್ರ ರೈಡರ್ ನವೀನ್ ಆಘಾತ ನೀಡಿದರು.
ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ಸ್ಪರ್ಧಾತ್ಮಕವಾಗಿ ಕಾದಾಟ ನಡೆಸಿದವು. ಮೊದಲ ಅವಧಿಯ ಆಟದಲ್ಲಿ ಕೇವಲ 4 ಅಂಕ ಸಂಪಾದನೆ ಮಾಡಿದರು. ಆದರೆ, ಈ ಅವಧಿಯಲ್ಲಿ ಅವರು ಕಾಲಿನ ಪಾದಕ್ಕೆ ಗಾಯ ಮಾಡಿಕೊಂಡಿದ್ದು ಡೆಲ್ಲಿ ತಂಡದ ಆತಂಕಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಬೆಂಗಳೂರು ಬುಲ್ಸ್ 17-16ರೊಂದಿಗೆ ಒಂದು ಅಂಕದ ಮುನ್ನಡೆ ಕಂಡುಕೊಳ್ಳುವಲ್ಲಿ ಯಶ ಕಂಡಿತ್ತು. ಮೊದಲ ಅವಧಿಯಲ್ಲಿ ರೇಡ್ ಪಾಯಿಂಟ್ ಮೂಲಕವೇ ಬೆಂಗಳೂರು ಬುಲ್ಸ್ 11 ಅಂಕ ಸಂಪಾದನೆ ಮಾಡಿದರೆ, ದಬಾಂಗ್ ತಂಡ ರೇಡ್ ಮೂಲಕ 7 ಅಂಕ ಸಂಪಾದನೆ ಮಾಡಿತ್ತು. ಅಲ್ಲದೆ, ಬೆಂಗಳೂರು ತಂಡವನ್ನು ಒಮ್ಮೆ ಆಲೌಟ್ ಮಾಡುವಲ್ಲೂ ದಬಾಂಗ್ ದೆಹಲಿ ತಂಡ ಯಶಸ್ವಿಯಾಗಿತ್ತು.
ವಿರಾಮದ ನಂತರ ದಬಾಂಗ್ ದೆಹಲಿ ತಂಡ ಫೀನಿಕ್ಸ್ ನಂತೆ ಆಟವನ್ನ ಆರಂಭಿಸಿತು. ಮೊದಲ 10 ನಿಮಿಷಗಳಲ್ಲಿ ಬುಲ್ಸ್ ತಂಡವನ್ನ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಆಟದ ಕೊನೆಯ 3 ನಿಮಿಷಗಳ ಅವಧಿಯಲ್ಲಿ 37-30 ಪಾಯಿಂಟ್ ಗಳೊಂದಿಗೆ ದೆಹಲಿ ತಂಡ 7 ಪಾಯಿಂಟ್ ಗಳ ಮುನ್ನಡೆಯನ್ನ ಸಾಧಿಸಿತ್ತು. ಅಂತಿಮವಾಗಿ ಫೈನಲ್ ಕನಸನ್ನ ಜೀವಂತವಾಗಿಸಿಕೊಂಡ ದಬಂಗ್ ಡೆಲ್ಲಿ ತಂಡ ಬುಲ್ಸ್ ತಂಡವನ್ನ 35 ಪಾಂಯಿಟ್ ಗಳಿಗೆ ಕಟ್ಟಿಹಾಕಿ 5 ಪಾಯಿಂಟ್ ಗಳ ಮುನ್ನಡೆಯನ್ನ ಸಾಧಿಸಿ ಗೆಲುವು ಕಂಡಿತು.
ದೆಹಲಿ ವಿರುದ್ಧ ಬೆಂಗಳೂರು ಬುಲ್ಸ್ ತಂಡದ ನಾಯಕ ಹಾಗೂ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ ಏಕಾಂಗಿ ಹೋರಾಟ ನಡೆಸಿದರು. ಪಂದ್ಯದಲ್ಲಿಯೇ ಗರಿಷ್ಠ 18 ಅಂಕಗಳನ್ನು ಗಳಿಸಿದರು. ಇದೇ ವೇಳೆ ರೈಡರ್ ನವೀನ್ ಕುಮಾರ್ ಡೆಲ್ಲಿ ಪರ 14 ಅಂಕ ಗಳಿಸಿದರು. ಆದರೆ, ಅವರಿಗೆ ರೈಡರ್ ನೀರಜ್ ನರ್ವಾಲ್ (5) ಮತ್ತು ಆಲ್ ರೌಂಡರ್ ವಿಜಯ್ (4) ಉತ್ತಮ ಬೆಂಬಲ ನೀಡಿದರು. ಇದೇ ಕಾರಣಕ್ಕೆ ಡೆಲ್ಲಿ ತಂಡ ಸತತ ಎರಡನೇ ಸೀಸನ್‌ನಲ್ಲಿ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
IPL 2022: ಮುಂಬೈನಲ್ಲಿ 55 ಪಂದ್ಯಗಳು, ಪುಣೆಯಲ್ಲಿ 15 ಪಂದ್ಯಗಳು..?
ಮತ್ತೊಮ್ಮೆ ದೆಹಲಿ ವಿರುದ್ಧವೇ ಸೋಲು: ಬೆಂಗಳೂರು ಬುಲ್ಸ್ ತಂಡಕ್ಕೆ ಸತತ 2ನೇ ಬಾರಿಗೆ ದಬಾಂಗ್ ದೆಹಲಿ ತಂಡವೇ ಸೆಮಿಫೈನಲ್ ನಲ್ಲಿ ಅಡ್ಡಿಯಾಗಿದೆ. 2019ರ ಪ್ರೊ ಕಬಡ್ಡಿಯ ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 44-38 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದ್ದ ಬೆಂಗಳೂರು ಮತ್ತೊಮ್ಮೆ ದಬಾಂಗ್ ದೆಹಲಿ ತಂಡಕ್ಕೆ ಶರಣಾಗಿದೆ.
Ind vs SL: ಟೀಂ ಇಂಡಿಯಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಲಂಕಾ ಸ್ಟಾರ್ ಅಲ್ರೌಂಡರ್..!
ಫೈನಲ್ ಗೆ ಪಟನಾ ಪೈರೇಟ್ಸ್: ದಿನದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ನಿರ್ವಹಣೆ ತೋರಿದ ಪಟನಾ ಪೈರೇಟ್ಸ್ (Patna Pirates) 38-27 ಅಂಕಗಳಿಂದ ಯುಪಿ ಯೋಧಾ(UP Yoddha)ತಂಡವನ್ನು ಸೋಲಿಸಿತು. ಪಟನಾ ಪರವಾಗಿ ಗಮನಸೆಳೆದ ಗುಮಾನ್ ಸಿಂಗ್ 8 ಅಂಕ ಸಂಪಾದನೆ ಮಾಡಿದರೆ, ಸಚಿನ್ (7) ಹಾಗೂ ಶಾರ್ದೂಲಾಯ್ (6) ಗಮನಸೆಳೆದರು. ಪಟನಾ ಪೈರೇಟ್ಸ್ ತಂಡಕ್ಕೆ ಯಾವುದೇ ಹಂತದಲ್ಲೂ ಯುಪಿ ಯೋಧಾ ತಂಡ ಸವಾಲು ನೀಡಲಿಲ್ಲ. ಭರ್ಜರಿ ನಿರ್ವಹಣೆಯೊಂದಿಗೆ ಫೈನಲ್ ಸಾಧನೆ ಮಾಡಿರುವ ಪಟನಾ ತಂಡ ನಾಲ್ಕನೇ ಬಾರಿಗೆ ಪ್ರೊ ಕಬಡ್ಡಿ ಲೀಗ್ ಟ್ರೋಫಿ ಜಯಿಸುವ ಗುರಿಯಲ್ಲಿದೆ.