Ind vs SL: ಟೀಂ ಇಂಡಿಯಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಲಂಕಾ ಸ್ಟಾರ್ ಅಲ್ರೌಂಡರ್..!
ಲಖನೌ: ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ (T20I Series) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಪ್ರವಾಸಿ ಲಂಕಾ ತಂಡದ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ದ್ವೀಪ ರಾಷ್ಟ್ರದ ತಾರಾ ಆಲ್ರೌಂಡರ್ ಭಾರತ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಫೆಬ್ರವರಿ 24ರಿಂದ ಲಖನೌದಲ್ಲಿ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನವೇ ಲಂಕಾ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಭಾರತ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಲಂಕಾ ತಂಡದ ಪಾಲಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.
ವನಿಂದು ಹಸರಂಗ, ಆಸ್ಟ್ರೇಲಿಯಾದ ಪ್ರವಾಸದ ವೇಳೆಯಲ್ಲಿಯೇ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಆಸೀಸ್ ಎದುರಿನ 5 ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದಾದ ಬಳಿಕ ಹಸರಂಗ ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು.
ಲಂಕಾ ಆಲ್ರೌಂಡರ್ ಹಸರಂಗ, ಕೋವಿಡ್‌ನಿಂದ ಚೇತರಿಸಿಕೊಂಡ ಬೆನ್ನಲ್ಲೇ ಭಾರತ ಎದುರಿನ ಸೀಮಿತ ಓವರ್‌ಗಳ ಸರಣಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಇದೀಗ ಟಿ20 ಸರಣಿ ಆರಂಭಕ್ಕೆ ಕೆಲವು ಗಂಟೆಗಳ ಬಾಕಿ ಇರುವಾಗ ಕೋವಿಡ್ ಟೆಸ್ಟ್ ಮಾಡಿಸಿದಾಗ ಹಸರಂಗ ಅವರಿಗೆ ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಸರಣಿಯಿಂದ ಹೊರಬಿದ್ದಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 10.5 ಕೋಟಿ ರುಪಾಯಿ ನೀಡಿ ವನಿಂದು ಹಸರಂಗ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ಕಳೆದ ಜುಲೈನಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾ ಪ್ರವಾಸ ಮಾಡಿದ್ದಾಗ, ವನಿಂದು ಹಸರಂಗ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು.
ಇನ್ನು ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ 8 ಪಂದ್ಯಗಳನ್ನಾಡಿ ಒಮ್ಮೆ ಹ್ಯಾಟ್ರಿಕ್ ವಿಕೆಟ್ ಸಹಿತ ಒಟ್ಟು 16 ವಿಕೆಟ್ ಪಡೆದಿದ್ದರು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.