IPL 2022: ಮುಂಬೈನಲ್ಲಿ 55 ಪಂದ್ಯಗಳು, ಪುಣೆಯಲ್ಲಿ 15 ಪಂದ್ಯಗಳು..?
* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ
* ಲೀಗ್ ಹಂತದ ಬಹುತೇಕ ಪಂದ್ಯಗಳಿಗೆ ಮುಂಬೈನ 3 ಸ್ಟೇಡಿಯಂ ಆತಿಥ್ಯ
* ಪುಣೆಯಲ್ಲಿ ನಡೆಯಲಿವೆ ಲೀಗ್ ಹಂತದ 15 ಪಂದ್ಯಗಳು
ಬೆಂಗಳೂರು(ಫೆ.23): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ ಕೊನೆಯ ವಾರದಲ್ಲಿ 15ನೇ ಆವೃತ್ತಿಯ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗುವುದು ಬಹುತೇಕ ಖಚಿತ ಎನಿಸಿದೆ. ಇದೀಗ ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ವೊಂದರ ವರದಿಯ ಪ್ರಕಾರ ಮುಂಬೈನಲ್ಲಿ 55 ಪಂದ್ಯಗಳು ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ.
ಖ್ಯಾತ ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್ ವರದಿಯ ಪ್ರಕಾರ, ಮುಂಬೈನ ಮೂರು ಕ್ರಿಕೆಟ್ ಸ್ಟೇಡಿಯಂಗಳಾದ ವಾಂಖೆಡೆ ಸ್ಟೇಡಿಯಂ, ಡಿ.ವೈ ಪಾಟೀಲ್ ಸ್ಟೇಡಿಯಂ ಹಾಗೂ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಲೀಗ್ ಹಂತದ ಒಟ್ಟು 55 ಪಂದ್ಯಗಳು ನಡೆದರೆ, ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ. ಇನ್ನು ಎಲ್ಲಾ ತಂಡಗಳು ವಾಂಖೆಡೆ ಹಾಗೂ ಡಿ.ವೈ. ಪಾಟೀಲ್ ಮೈದಾನದಲ್ಲಿ ತಲಾ 4 ಪಂದ್ಯಗಳನ್ನಾಡಿದರೆ, ಬ್ರೆಬೋರ್ನ್ ಹಾಗೂ ಪುಣೆ ಕ್ರಿಕೆಟ್ ಮೈದಾನದಲ್ಲಿ ತಲಾ 3 ಪಂದ್ಯಗಳನ್ನಾಡಲಿವೆ.
ಈ ಮೊದಲೇ ವರದಿಯಾದಂತೆ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯು ಮಾರ್ಚ್ 26 ಅಥವಾ ಮಾರ್ಚ್ 27ರಂದು ಆರಂಭವಾಗುವ ಸಾಧ್ಯತೆಯಿದೆ. ಡಬ್ಬಲ್ ಹೆಡ್ಡರ್ ಪಂದ್ಯಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಟೂರ್ನಿ ಆರಂಭದ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮೇ 29ರಂದು ಐಪಿಎಲ್ ಫೈನಲ್ ಪಂದ್ಯವು ಜರುಗಲಿದೆ. ಇನ್ನುಳಿದಂತೆ ಪ್ಲೇ ಆಫ್ ಪಂದ್ಯಗಳು ಎಲ್ಲಿ ನಡೆಯಲಿದೆ ಎನ್ನುವ ಕುತೂಹಲಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಈ ಮೊದಲು ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು.
IPL Broadcast Rights: ಐಪಿಎಲ್ ಪ್ರಸಾರ ಹಕ್ಕು ಖರೀದಿಗೆ ಅಮೆಜಾನ್, ರಿಲಯನ್ಸ್ ಆಸಕ್ತಿ?
ಒಟ್ಟಾರೆಯಾಗಿ ಇದೇ ಫೆಬ್ರವರಿ 24ರಂದು ಐಪಿಎಲ್ ಆಡಳಿತ ಮಂಡಳಿಯ ಸಭೆಯು ನಡೆಯಲಿದ್ದು, ಈ ಸಭೆಯ ವೇಳೆಯಲ್ಲಿಯೇ ಐಪಿಎಲ್ ವೇಳಾಪಟ್ಟಿಯ ಕುರಿತಂತೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸ್ನಾಯು ಸೆಳೆತ: ಲಂಕಾ ಟಿ20 ಸರಣಿಗೆ ಚಹರ್ ಅಲಭ್ಯ
ನವದೆಹಲಿ: ಭಾರತದ ಮುಂಚೂಣಿಯ ವೇಗದ ಬೌಲರ್ ದೀಪಕ್ (Deepak Chahar) ಚಹರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಗುರುವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಅಲಭ್ಯರಾಗಲಿದ್ದಾರೆ. ಕೋಲ್ಕತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರು ಇನ್ನೂ ಚೇತರಿಸಿಲ್ಲ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೊಳಗಾಗಲಿದ್ದಾರೆ.
ಬಿಸಿಸಿಐ (BCCI) ಮಾಹಿತಿಯ ಪ್ರಕಾರ, ದೀಪಕ್ ಚಹರ್ ಬಲ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರೆ, ಇನ್ನು ವಿಂಡೀಸ್ ಎದುರಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವ ಸೂರ್ಯಕುಮಾರ್ ಯಾದವ್ ಕೂಡಾ ಗಾಯಕ್ಕೆ ಒಳಗಾಗಿದ್ದಾರೆ. ಈ ಇಬ್ಬರು ಆಟಗಾರರು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೀಪಕ್ ಚಹರ್ ಅವರನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 14 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇನ್ನು 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 8 ಕೋಟಿ ರುಪಾಯಿ ನೀಡಿ ಹರಾಜಿಗೂ ಮುನ್ನವೇ ರೀಟೈನ್ ಮಾಡಿಕೊಂಡಿತ್ತು. ಈ ಇಬ್ಬರು ಆಟಗಾರರ ಅನುಪಸ್ಥಿತಿ ಟೀಂ ಇಂಡಿಯಾಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 27ರಿಂದ ಆರಂಭವಾಗುವ ಸಾಧ್ಯತೆಯಿದ್ದು, ಈ ವೇಳೆಗಾಗಲೇ ಸಂಪೂರ್ಣ ಫಿಟ್ ಆಗುವ ಸಾಧ್ಯತೆಯಿದೆ.