Pro kabaddi League ಬುಲ್ಸ್ ಡಿಚ್ಚಿಗೆ ತಮಿಳು ತಲೈವಾಸ್‌ ಪಲ್ಟಿ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು!

ಬೆಂಗಳೂರು ಬುಲ್ಸ್ ಆಟಕ್ಕೆ ತಮಿಳು ತಲೈವಾಸ್ ತಲೆಬಾಗಿದೆ. ಈ ಮೂಲಕ ಬೆಂಗಳೂರು ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

Pro kabaddi League 2022 bengaluru bulls thrash tamil thalaivas by 45 28 points and climb to 3rd spot ckm

ಬೆಂಗಳೂರು(ಅ.19) ಆರಂಭಿಕ ಎರಡು ಪಂದ್ಯ ಗೆದ್ದ ಬಳಿಕ ಸತತ 2 ಸೋಲು ಬೆಂಗಳೂರು ಬುಲ್ಸ್ ತಂಡ ಮಾತ್ರವಲ್ಲ ಅಭಿಮಾನಿಗಳನ್ನು ಕಂಗೆಡಿಸಿತ್ತು. ಆದರೆ ಬುಲ್ಸ್ ಅಷ್ಟೇ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ತಮಿಳು ತಲೈವಾಸ್ ವಿರುದ್ದ ರೋಚಕ ಹೋರಾಟದಲ್ಲಿ ಬುಲ್ಸ್ ಗೆಲುವಿನ ನಗೆ ಬೀರಿದೆ.  ಆಲ್ರೌಂಡ್‌ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಮನೆಯಂಗಣದಲ್ಲಿ ತಮಿಳು ತಲೈವಾಸ್‌ ವಿರುದ್ಧ 45-28 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ. ಭರತ್‌ ಅವರ ಸೂಪರ್‌ ಟೆನ್‌ (12) ಹಾಗೂ ವಿಕಾಶ್‌ ಕಂಡೋಲ (7) ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಮಿಳು ತಲೈವಾಸ್‌ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾಯಿತು. ನಾಯಕ ಮಹೇಂದರ್‌ ಸಿಂಗ್‌ ಮತ್ತು ಸೌರಭ್‌ ನಂದಾಲ್‌ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.  ತಮಿಳು ತಲೈವಾಸ್‌ ಪವನ್‌ ಶೆರಾವತ್‌ ಇಲ್ಲದೆ ಮತ್ತೊಂದು ಪಂದ್ಯವನ್ನು ಸೋತಿತು, ತಂಡದ ಪರ ನರೇಂದರ್‌ ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. 

ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ: 
ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ತಮಿಳು ತಲೈವಾಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 18-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ತಮಿಳು ತಲೈವಾಸ್‌ ಆರಂಭದಲ್ಲಿ ಬೃಹತ್‌ ಅಂತರದಲ್ಲಿ ಹಿನ್ನಡೆ ಕಂಡಿತ್ತು, ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡಿತು. ಬೆಂಗಳೂರು ಬುಲ್ಸ್‌ ಪರ ಭರತ್‌ ಹಾಗೂ ನೀರಜ್‌ ನರ್ವಾಲ್‌ ತಲಾ 5 ರೈಡಿಂಗ್‌ ಅಂಕಗಳನ್ನು ಗಳಿಸಿ ಪ್ರಥಮಾರ್ಧದ ಮುನ್ನಡೆಗೆ ನೆರವಾದರು.

PKL ಪುಣೇರಿ ಮುಂದೆ ತೆಲುಗು ಟೈಟಾನ್ಸ್ ಪಲ್ಟಿ, ಪಿಂಕ್ ಪ್ಯಾಂಥರ್ಸ್ ಅಬ್ಬರಕ್ಕೆ ತಲೆಬಾಗಿದ ಬೆಂಗಾಲ್!

ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬೆಂಗಳೂರು ಬುಲ್ಸ್‌ ತಂಡಕ್ಕೆ ಈ ಮುನ್ನಡೆ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ಸ್ಪಷ್ಟ. ತಮಿಳು ತಲೈವಾಸ್‌ ಪರ ನರೆಂದರ್‌ 7 ಅಂಕಗಳನ್ನು ಗಳಿಸಿ ಉತ್ತಮ ಪೈಪೋಟಿ ನೀಡುವಲ್ಲಿ ನೆರವಾದರು. ಟ್ಯಾಕಲ್‌ನಲ್ಲ ತಮಿಳು ತಲೈವಾಸ್‌ 4 ಅಂಕಗಳನ್ನು ಗಳಿಸಿತು. ಬೆಂಗಳೂರು ಬುಲ್ಸ್‌ ಆರಂಭದಲ್ಲಿ ತೋರಿದ ಉತ್ಸಹಾವನ್ನು ಕೊನೆಯ ಕ್ಷಣದವರೆಗೂ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್‌ ಪಡೆಯನ್ನು ಆಲೌಟ್‌ ಮಾಡುವ ಮೂಲಕ ಮುನ್ನಡೆಗೆ ಮತ್ತೆರಡು ಅಂಕಗಳನ್ನು ಗಳಿಸಿತ್ತು.

ಕಳೆದ ಪಂದ್ಯದಲ್ಲಿ ಯುಪಿ ವಿರುದ್ಧ ಮುಗ್ಗರಿಸಿದ್ದ ಬೆಂಗಳೂರು
ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಯುಪಿ ಯೋಧಾಸ್ ವಿರುದ್ದ ಮುಗ್ಗರಿಸಿತ್ತು. ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿತ್ತು.  ಪ್ರದೀಪ್‌ ನರ್ವಾಲ್‌ ಹಾಗೂ ಸುರಿಂದರ್‌ ಸಿಂಗ್‌ ತಲಾ 14 ಅಂಕಗಳನ್ನು ಗಳಿಸುವ ಮೂಲಕ ಜಯದ ಹಾದಿಯನ್ನು ಸುಗಮಗೊಳಿಸಿದರು. ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್‌ ಪರ ವಿಕಾಶ್‌ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು. ಆದರೆ ಈ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ

Latest Videos
Follow Us:
Download App:
  • android
  • ios