PKL ಪುಣೇರಿ ಮುಂದೆ ತೆಲುಗು ಟೈಟಾನ್ಸ್ ಪಲ್ಟಿ, ಪಿಂಕ್ ಪ್ಯಾಂಥರ್ಸ್ ಅಬ್ಬರಕ್ಕೆ ತಲೆಬಾಗಿದ ಬೆಂಗಾಲ್!
ಜೈಪುರ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಪುಣೇರಿ ಪಲ್ಟಾನ್ ನಾಲ್ಕನೇ ಸ್ಥಾನದಲ್ಲಿದೆ. ಜೈಪುರ ಹಾಗೂ ಪುಣೇರಿ ತಂಡದ ಹೋರಾಟ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಅ.18): ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಗೆಲುವು ದಾಖಲಿಸಿದೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 26-25 ಅಂತರದಲ್ಲಿ ಜಯ ಗಳಿಸಿ ಸಂಭ್ರಮಿಸಿತು, ಮೋಹಿತ್ ಗೊಯತ್ ಗಳಿಸಿದ ಸೂಪರ್ 10 ನೆರವಿನಿಂದ ಜಯ ಗಳಿಸಿದ ಪುಣೇರಿ ಪಲ್ಟನ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಪ್ರಥಮಾರ್ಧದಲ್ಲಿ ಪುಣೇರಿ ಪಲ್ಟನ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 11-9ರಲ್ಲಿ ಮುನ್ನಡೆ ಕಂಡಿತ್ತು. ಮೋಹಿತ್ ಗೊಯತ್ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಮೊಹಮ್ಮದ್ ನಬೀಬಕ್ಷ್ ರೈಡಿಂಗ್‌ನಲ್ಲಿ 3 ಅಂಕಗಳನ್ನು ಗಳಿಸಿದರು. ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯಿ 3 ಅಂಕಗಳನ್ನು ಗಳಿಸಿದರು. ಎರಡು ಅಂಕಗಳನ್ನು ಪುಣೇರಿ ಪಲ್ಟನ್ ಪ್ರಮಾದದ ಅಂಕವಾಗಿ ಟೈಟಾನ್ಸ್‌ಗೆ ನೀಡಿತ್ತು.
ಜೈಪುರಕ್ಕೆ ಜಯ: ಅರ್ಜುನ್ ದೇಶ್ವಾಲ್ (10) ಅವರ ಸೂಪರ್ ಟೆನ್ ಸಾಧನೆಯೊಂದಿಗೆ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 39-24 ಅಂಕಗಳ ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು. ಇದುವರೆಗೂ ನಡೆದ ಪಂದ್ಯಗಳಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ವಿ ಅಜಿತ್ ರೈಡಿಂಗ್‌ನಲ್ಲಿ ಮತ್ತು ಅಂಕುಶ್ ಟ್ಯಾಕಲ್‌ನಲ್ಲಿ ತಲಾ 5 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಾಲ್ ವಾರಿಯರ್ಸ್ ಪರ ರೈಡಿಂಗ್‌ನಲ್ಲಿ ಶ್ರೀಕಾಂತ್ ಜಾದವ್ (6) ಹಾಗೂ ಗಿರೀಶ್ ಮಾರುತಿ(3) ಟ್ಯಾಕಲ್‌ನಲ್ಲಿ ಮಿಂಚಿದರೂ ಜಯದ ದಡ ತಲುಪಿಸುವಲ್ಲಿ ವಿಫಲರಾದರು.
ದಬಾಂಗ್ ದಿಲ್ಲಿಗೆ 5ನೇ ಗೆಲುವಿನ ಸಕ್ಸಸ್, ಜಯ ಖಾತೆ ತೆರೆದ ತಲೈವಾಸ್!
ಪ್ರಥಮಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 20-12 ಅಂತರದಲ್ಲಿ ಬೆಂಗಾಲ್ ವ್ಯಾರಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿತ್ತು. ರೈಡಿಂಗ್‌ನಲ್ಲಿ 11, ಟ್ಯಾಕಲ್‌ನಲ್ಲಿ 6 ಮತ್ತು ಆಲೌಟ್ ಮೂಲಕ 2 ಅಂಕ ಗಳಿಸಿದ ಪೈಪುರ ಪಂದ್ಯ ಗೆಲ್ಲಲು ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತ್ತು. ಬಲಿಷ್ಠ ಬೆಂಗಾಲ್ ವಾರಿಯರ್ಸ್ ಮೂರು ಪಂದ್ಯಗಳಲ್ಲಿ ನಿರಂತರ ಜಯ ಗಳಿಸಿದ ನಂತರ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ತನ್ನ ನೈಜ ಸಾಂರ್ಥ್ಯವನ್ನು ತೋರಿಸುವಲ್ಲಿ ವಿಫಲವಾಯಿತು. ಜೈಪುರ ಪಿಂಕ್ ಪ್ಯಾಂಥರ್ಸ್ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿದಿತ್ತು. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ ರೈಡಿಂಗ್‌ನಲ್ಲಿ ವೈಫಲ್ಯ ಕಂಡಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.