ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಇರಾನ್‌ನ ಮೊಹಮ್ಮದ್ ರಜಾ ಶಾದ್ಲೂ ಮತ್ತು ಭಾರತದ ದೇವಾಂಕ್ ದಲಾಲ್ ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದಾರೆ. ಶಾದ್ಲೂ 2.23 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರೆ, ದೇವಾಂಕ್ 2.205 ಕೋಟಿಗೆ ಬೆಂಗಾಲ್ ವಾರಿಯರ್ಸ್ ಪಾಲಾಗಿದ್ದಾರೆ.

ಮುಂಬೈ: ಭಾರತದ ಯುವ ರೈಡರ್ ದೇವಾಂಕ್ ದಲಾಲ್ ಹಾಗೂ ಇರಾನ್‌ನ ಚಾಣಾಕ್ಷ ರೈಡರ್, ಬಲಿಷ್ಠ ಬಾಹುಗಳ ಡಿಫೆಂಡರ್ ಮೊಹಮ್ಮದ್ ರಜಾ ಶಾದ್ಲೂ 12ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನಲ್ಲಿ ಬಂಪರ್ ಬೆಲೆಗೆ ಹರಾಜಾಗಿದ್ದಾರೆ. ಶನಿವಾರ ಮೊದಲ ದಿನದ ಹರಾಜಿನಲ್ಲಿ ಶಾದ್ದೂ ಗುಜರಾತ್ ಜೈಂಟ್ಸ್ ತಂಡಕ್ಕೆ 2.23 ಕೋಟಿಗೆ ಬಿಕರಿಯಾದರೆ, ದೇವಾಂಕ್‌ರನ್ನು ಬೆಂಗಾಲ್ ವಾರಿಯರ್ಸ್ 2.205 ಕೋಟಿ ನೀಡಿ ಖರೀದಿಸಿತು. ಶಾದ್ಲೂ ಸತತ 3 ಆವೃತ್ತಿಗಳಲ್ಲಿ ತಲಾ 2+ ಕೋಟಿಗೆ

ಹರಾಜಾದ ಮೊದಲ ಆಟಗಾರ ಎನಿಸಿಕೊಂಡರು.

ತಾರಾ ರೈಡರ್ ಆಶು ಮಲಿಕ್ (ದಬಾಂಗ್ ಡೆಲ್ಲಿ) 1.90 ಕೋಟಿ ರುಪಾಯಿ, ಆಲ್ರೌಂಡರ್ ಅಂಕಿತ್ ಜಗನ್ (ಪಾಟ್ನಾ ಪೈರೇಟ್ಸ್‌), 1.405 ಕೋಟಿ, 1.57 ಕೋಟಿ, ಅರ್ಜುನ್ (ತಮಿಳ್ ತಲೈವಾಸ್) ಕೋಟಿ, ಡಿಫೆಂಡರ್‌ ಯೋಗೇಶ್ ದಹಿಯಾ (ಬೆಂಗಳೂರು ಬುಲ್ಸ್) 1.125 ಕೋಟಿಗೆ ಹರಾಜಾದರು. ಆದರೆ ಲೀಗ್‌ನ ಅತ್ಯಂತ ಯಶಸ್ವಿ ರೈಡರ್ ಪ್ರದೀಪ್ ನರ್ವಾಲ್ ಯಾವುದೇ ತಂಡಕ್ಕೆ ಬಿಕರಿಯಾಗದೆ ಅಚ್ಚರಿ ಮೂಡಿಸಿದರು. ಕಳೆದ ವರ್ಷ ಪ್ರದೀಪ್ ನರ್ವಾಲ್ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಫ್ರೆಂಚ್ ಓಪನ್: ಆಲ್ಕರಜ್, ಸಿನ್ನರ್ ಪ್ರಿ ಕ್ವಾರ್ಟರ್‌ಗೆ

ಪ್ಯಾರಿಸ್: ಹಾಲಿ ಚಾಂಪಿಯನ್, ಟೆನಿಸ್‌ನ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ರಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವ ನಂ.1 ಯಾನಿಕ್ ಸಿನ್ನರ್ ಕೂಡಾ 4ನೇ ಸುತ್ತಿಗೇರಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ 3ನೇ ಸುತ್ತಿನಲ್ಲಿ ಸ್ಪೇನ್‌ನ 22 ವರ್ಷದ ಆಲ್ಕರಜ್, ಬೋಸ್ನಿಯಾದ ದಾಮಿರ್ ದುಮ್‌ಹು‌ ವಿರುದ್ಧ 6-1, 6-3, 4-6, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಕಳೆದೆರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ ಸಿನ್ನರ್ 3ನೇ ಸುತ್ತಿನಲ್ಲಿ ಚೆಕ್ ಗಣರಾಜ್ಯದ ಜಿರಿ ಲೆಹೆಕ್ಕಾ ಅವರನ್ನು 6-0, 6-1, 6-2 ಸೆಟ್‌ಗಳಲ್ಲಿ ಮಣಿಸಿದರು.

ರಬೈಕೆನಾ ಪ್ರಿ ಕ್ವಾರ್ಟರ್‌ಗೆ ಲಗ್ಗೆ: ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ 2022ರ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕನಾ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿದರು. ಆದರೆ ಮೂರನೇ ಶ್ರೇಯಾಂಕಿತೆ, ಅಮೆರಿಕದ ಜೆಸಿಕಾ ಪೆಗುಲಾ, ಸ್ಟೇನ್‌ನ 10ನೇ ಶ್ರೇಯಾಂಕಿತ ಪಾಲಾ ಬಡೋಸಾ ಸೋತು ಹೊರಬಿದ್ದರು.

ಬೋಪಣ್ಣ 3ನೇ ಸುತ್ತಿಗೆ

ಪುರುಷರ ಡಬಲ್ಸ್‌ನಲ್ಲಿ ಕನ್ನಡಿಗ ರೋಹಣ್ ಬೋಪಣ್ಣ- ಚೆಕ್ ಗಣರಾಜ್ಯದ ಆಡಂ ಪಾವಸೆಕ್ ಜೋಡಿ 3ನೇ ಸುತ್ತು ಪ್ರವೇಶಿಸಿತು. 2ನೇ ಸುತ್ತಿನಲ್ಲಿ ಫ್ರಾನ್ಸ್‌ನ ಫ್ಯಾಬಿಯನ್ ರೆಬೊಲ್-ಸ್ಯಾಡಿಯೊ ಡೌಂಬಿಯಾ ಜೋಡಿ 6-7(2-7), 7-6(7-5), 6-2 ಸೆಟ್‌ಗಳಿಂದ ಗೆಲುವು ಸಾಧಿಸಿತು.

ಲಿಂಗತ್ವ ಪರೀಕ್ಷೆ ಪಾಸಾದ್ರೆ ಮಾತ್ರ ಬಾಕ್ಸರ್ ಖೆಲಿಫ್‌ಗೆ ಇನ್ನು ಸ್ಪರ್ಧೆಗೆ ಅವಕಾಶ!

ಲಂಡನ್: ವಿಶ್ವ ಬಾಕ್ಸಿಂಗ್ ಆಡಳಿತ ಮಂಡಳಿಯು ಬಾಕ್ಸರ್‌ಗಳಿಗೆ ಲಿಂಗತ್ವ ಪರೀಕ್ಷೆ ಕಡ್ಡಾಯಗೊಳಿಸಿದೆ. ಹೀಗಾಗಿ, ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದ್ದ ಅಕ್ಟೋರಿಯಾದ ಇಮಾನೆ ಖೆಲಿಫ್ ಈ ಪರೀಕ್ಷೆಯಲ್ಲಿ ಪಾಸಾದರಷ್ಟೇ ಇನ್ನು ಮುಂದೆ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.

ವಿಶ್ವ ಬಾಕ್ಸಿಂಗ್ ಲಿಂಗತ್ವ ಪರೀಕ್ಷೆ ಕಡ್ಡಾಯಗೊಳಿಸಿ ಶುಕ್ರವಾರ ಆದೇಶ ಹೊರಡಿಸಿತು. ಈ ವೇಳೆ ಖೆಲಿಫ್ ಹೆಸರನ್ನು ಉಲ್ಲೇಖಿಸಿದ ವಿಶ್ವ ಬಾಕ್ಸಿಂಗ್, ಮುಂಬರುವ ಯಾವುದೇ ಸ್ಪರ್ಧೆಯಲ್ಲಿ ಅವರು ಭಾಗವಹಿಸಬೇಕಾದರೆ ಲಿಂಗತ್ವ ಪರೀಕ್ಷೆ ಕಡ್ಡಾಯವಾಗಿ ಪಾಸ್ ಆಗಬೇಕು ಎಂದಿದೆ. ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿ ಖೆಲಿಫ್ ಚಿನ್ನ ಗೆದ್ದಿದ್ದರು. ಆದರೆ ಅವರ ಲಿಂಗ ತ್ವದ ವಿಚಾರ ದೊಡ್ಡ ಮಟ್ಟಿಗೆ ವಿವಾದ ಹುಟ್ಟುಹಾಕಿತ್ತು.