ಬೆಂಗಳೂರು ಬುಲ್ಸ್‌ನ ಓನ್ ಮ್ಯಾನ್ ಆರ್ಮಿ ಪವನ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಫಲಿತಾಂಶ ಪವನ್ ಮೇಲೆ ನಿಂತಿದೆ. ಪವನ್ ಮಿಂಚಿದರಷ್ಟೇ ಬುಲ್ಸ್‌ಗೆ ಗೆಲುವು ಸಾಧ್ಯವಾಗುತ್ತಿದೆ. 3 ರೈಡರ್‌ಗಳ ಆಟವನ್ನು ಒಬ್ಬರೇ ನಿರ್ವಹಿಸುತ್ತಿರುವ ರೈಡ್ ಮಷಿನ್ ಪವನ್ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ನವದೆಹಲಿ(ಆ.28): ‘ನಾವು ಹಾಲಿ ಚಾಂಪಿಯನ್ಸ್. ನಾವು ಯಾರಿಗೂ ಹೆದರುವುದಿಲ್ಲ. ನಮ್ಮನ್ನು ನೋಡಿ ಎದುರಾಳಿಗಳು ಹೆದರುತ್ತಾರೆ’ ಇದು ಬೆಂಗಳೂರು ಬುಲ್ಸ್‌ನ ರೈಡ್ ಮಷಿನ್ ಪವನ್ ಶೆರಾವತ್ ಕೆಚ್ಚೆದೆಯ ಮಾತು. ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪವನ್, ಬುಲ್ಸ್‌ನ ಒನ್ ಮ್ಯಾನ್ ಆರ್ಮಿಯಂತಾಗಿದ್ದಾರೆ. ಅವರು ಮಿಂಚಿದರಷ್ಟೇ ಬುಲ್ಸ್‌ಗೆ ಗೆಲುವು ಎನ್ನುವಂತಾಗಿದೆ. ತಮ್ಮ ಮೇಲೆ ಎಷ್ಟೇ ಒತ್ತಡ ಬಿದ್ದರೂ ಸರಿ, ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ಪವನ್, ‘ಎದುರಾಳಿ ಅಂಕಣಕ್ಕೆ ನುಗ್ಗಿ, ಅಂಕ ಹೆಕ್ಕಿ ತಂಡವನ್ನು ಗೆಲ್ಲಿಸುವುದೇ ನನ್ನ ಗುರಿ’ ಎಂದು ‘ಕನ್ನಡಪ್ರಭ’ದೊಂದಿಗೆ ತಮ್ಮ ಅನುಭವ ಹಾಗೂ ಯೋಜನೆಗಳನ್ನು ಹಂಚಿಕೊಳ್ಳುತ್ತಾ ಹೇಳಿದರು.
ಇದನ್ನೂ ಓದಿ: PKL 2019: ಜೈಪುರ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
ಸೆಂಚುರಿ ಸ್ಟಾರ್ ಪವನ್!
6ನೇ ಆವೃತ್ತಿಯಲ್ಲಿ 271 ರೈಡಿಂಗ್ ಅಂಕ ಗಳಿಸಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪವನ್, ತಾರಾ ಆಟಗಾರನಾಗಿ ಬದಲಾದರು. ಕಳೆದ ಆವೃತ್ತಿಯಲ್ಲಿ ಆಡುವಾಗ ಅವರ ಮೇಲಿದ್ದ ಒತ್ತಡ, ನಿರೀಕ್ಷೆಗೂ ಈ ಆವೃತ್ತಿಯಲ್ಲಿ ಅವರ ಮೇಲಿರುವ ಒತ್ತಡ ಹಾಗೂ ನಿರೀಕ್ಷೆಗೂ ವ್ಯತ್ಯಾಸವಿದೆ. ಈ ಆವೃತ್ತಿಯ ಮೊದಲ ಪಂದ್ಯದಿಂದಲೇ ಪವನ್ ಮೇಲೆ ಅಭಿಮಾನಿಗಳು, ಲೀಗ್ ಆಯೋಜಕರು, ತಂಡ ಎಲ್ಲರೂ ಭಾರೀ ನಿರೀಕ್ಷೆ ಇರಿಸಿದ್ದಾರೆ. ಪವನ್ ಶ್ರೇಷ್ಠ ಆಟಗಾರ ಎನಿಸಿಕೊಳ್ಳಲು ಕಾರಣ, ಅವರು ಎಲ್ಲರ ನಿರೀಕ್ಷೆಗೆ ಮೀರಿದ ಆಟವಾಡುತ್ತಿದ್ದಾರೆ. ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: PKL7: ಬೆಂಗಳೂರು ಬುಲ್ಸ್ ನೆಗೆತಕ್ಕೆ ಅಪ್ಪಚ್ಚಿಯಾದ ತಮಿಳ್ ತಲೈವಾಸ್!
ಪವನ್ ಈ ಆವೃತ್ತಿಯಲ್ಲಿ 100 ರೈಡಿಂಗ್ ಅಂಕ ಗಳಿಸಿದ ಮೊದಲ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. 11 ಪಂದ್ಯಗಳಿಂದ 128 ರೈಡ್ ಅಂಕ ಗಳಿಸಿರುವ ಪವನ್ ಅಗ್ರ ಸ್ಥಾನದಲ್ಲಿದ್ದಾರೆ. ಪವನ್ ಹೊರತು ಪಡಿಸಿ ಅತಿಹೆಚ್ಚು ರೈಡ್ ಅಂಕ ಗಳಿಸಿದ ಅಗ್ರ 10 ಆಟಗಾರರ ಪಟ್ಟಿಯಲ್ಲಿ ಬುಲ್ಸ್‌ನ ಮತ್ತ್ಯಾವ ಆಟಗಾರರೂ ಇಲ್ಲ. ನಾಯಕ ರೋಹಿತ್ ಕುಮಾರ್ 11 ಪಂದ್ಯಗಳಿಂದ 53 ಅಂಕ ಕಲೆಹಾಕಿದ್ದಾರೆ. ಇದೊಂದೇ ಅಂಕಿ-ಅಂಶ ಸಾಕು, ಬೆಂಗಳೂರು ತಂಡ ಪವನ್ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತಗೊಂಡಿದೆ ಎನ್ನುವುದನ್ನು ತಿಳಿಯಲು.
ಇದನ್ನೂ ಓದಿ: PKL7: ಬೆಂಗಾಲ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು!
ಪವನ್ ಒನ್ ಮ್ಯಾನ್ ಆರ್ಮಿ ಯಾಕೆ?
ಬುಲ್ಸ್‌ನ ಪ್ರಮುಖ ರೈಡರ್‌ಗಳಲ್ಲಿ ಒಬ್ಬರಾದ ನಾಯಕ ರೋಹಿತ್ ಈ ಬಾರಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇತ್ತೀಚೆಗೆ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಂಕ ಖಾತೆಯನ್ನೇ ತೆರೆಯದ ರೋಹಿತ್, ಕಳೆದ ಪಂದ್ಯದಲ್ಲಿ ಜೈಪುರ ವಿರುದ್ಧ 13 ಅಂಕ ಗಳಿಸಿದ್ದರು. ಬುಲ್ಸ್ ಸದ್ಯ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದ್ದು, 5ರಲ್ಲಿ ಸೋತಿದೆ. ಪವನ್ ಹಿನ್ನಡೆ ಅನುಭವಿಸಿದ ಪಂದ್ಯಗಳಲ್ಲಿ ತಂಡಕ್ಕೂ ಹಿನ್ನಡೆಯಾಗಿದೆ.
ಬುಲ್ಸ್ 11 ಪಂದ್ಯಗಳಿಂದ 211 ರೈಡ್ ಅಂಕ ಗಳಿಸಿದೆ. ಇದರಲ್ಲಿ 128 ಅಂಕಗಳನ್ನು ಪವನ್ ಒಬ್ಬರೇ ಗಳಿಸಿದ್ದಾರೆ. ಎಂದರೇ ಶೇ.50ಕ್ಕಿಂತ ಹೆಚ್ಚು ಅಂಕಗಳನ್ನು ಪವನ್ ಒಬ್ಬರೇ ತಂದುಕೊಟ್ಟಿದ್ದಾರೆ. ತಂಡ ನಡೆಸಿರುವ ಒಟ್ಟು 451 ರೈಡ್‌ಗಳಲ್ಲಿ ಪವನ್ 199 ರೈಡ್‌ಗಳನ್ನು ಮಾಡಿದ್ದಾರೆ. ಈ ಅಂಕಿ-ಅಂಶಗಳು ಅವರೆಷ್ಟರ ಮಟ್ಟಿಗೆ ಶ್ರಮ ವಹಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ.
ಪವನ್ ಮೇಲೆ ಒತ್ತಡ ಬೀಳಲು ಕಾರಣ?
ಕಳೆದ ಆವೃತ್ತಿಯಲ್ಲಿ ಪವನ್ ಜತೆ ರೋಹಿತ್ ಸಹ ಉತ್ತಮ ಆಟವಾಡಿದ್ದರು. ಇವರಿಬ್ಬರಲ್ಲದೇ 3ನೇ ರೈಡರ್ ಆಗಿ ಕಾಶಿಲಿಂಗ್ ಅಡಕೆ ಇದ್ದರು. ಪವನ್ ಹಾಗೂ ರೋಹಿತ್ ಇಬ್ಬರೂ ಅಂಕಣದಲ್ಲಿ ಇಲ್ಲದಿದ್ದಾಗ ಕಾಶಿ ಅಂಕ ಗಳಿಸಿ, ಇಬ್ಬರನ್ನು ಅಂಕಣಕ್ಕೆ ಕರೆ ತರುತ್ತಿದ್ದರು. ಆದರೆ ಈ ಬಾರಿ ಹಾಗಾಗುತ್ತಿಲ್ಲ. ರೋಹಿತ್ ಸ್ಥಿರತೆ ಕಾಯ್ದುಕೊಳ್ಳುತ್ತಿಲ್ಲ. 3ನೇ ರೈಡರ್ ಸಮಸ್ಯೆ ಇದೆ. ಪವನ್ ಎಷ್ಟುಹೊತ್ತು ಅಂಕಣದಲ್ಲಿ ಇರುತ್ತಾರೆ, ಎಷ್ಟುಅಂಕ ಗಳಿಸುತ್ತಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.
‘ಒಬ್ಬನ ಮೇಲೆಯೇ ಹೆಚ್ಚು ಜವಾಬ್ದಾರಿ ಬಿದ್ದಿರುವ ಕಾರಣ, ಒಮ್ಮೊಮ್ಮೆ ಕೊಂಚ ಆತಂಕವಾಗುತ್ತದೆ. ಆದರೆ, ರೋಹಿತ್ ಲಯ ಕಂಡುಕೊಳ್ಳುತ್ತಿರುವುದು ತಂಡದ ಪಾಲಿಗೆ ಅತ್ಯುತ್ತಮ ಸುದ್ದಿ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವವರಿಗೆ ಹೆಚ್ಚು ಲಾಭವಿರುವ ಕಾರಣ, ಸದ್ಯ ನಮ್ಮ ಕಣ್ಣು ಅದರ ಮೇಲಿದೆ. 2 ಆವೃತ್ತಿಗಳ ಬಳಿಕ ಬೆಂಗಳೂರಲ್ಲಿ ತಂಡ ಆಡಲಿದೆ. ನಮ್ಮ ಮೇಲೆ ಸ್ವಲ್ಪ ಒತ್ತಡವಿದೆ. ಆದರೆ ಅಭಿಮಾನಿಗಳ ನಿರೀಕ್ಷೆ ಉಳಿಸಿಕೊಳ್ಳುತ್ತೇವೆ’ಎಂಜು ಬುಲ್ಸ್ ಸ್ಟಾರ್ ಪ್ಲೇಯರ್ ಪವನ್ ಶೆರಾವತ್ ಹೇಳಿದ್ದಾರೆ
ವರದಿ: ವಿನಯ್ ಕುಮಾರ್ ಡಿ.ಬಿ.