ನವದೆಹಲಿ[ಆ.25]: ಕಳೆದೆರಡು ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಬಲಾಢ್ಯ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಯು ಮುಂಬಾ ತಂಡವನ್ನು ಹಿಂದಿಕ್ಕಿ ಬುಲ್ಸ್ ನಾಲ್ಕನೇ ಸ್ಥಾನಕ್ಕೇರಿದೆ. ಇನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ಡೆಲ್ಲಿ ಚರಣದಲ್ಲಿ ಸತತ ಎರಡನೇ ಸೋಲು ಕಂಡಿದೆ.

PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ

ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 58ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಜೈಪುರ ತಂಡಗಳು ಮುಖಾಮುಖಿಯಾಗಿದ್ದವು. ಬುಲ್ಸ್ ತಂಡವು 41-30 ಅಂಕಗಳಿಂದ ಪಂದ್ಯವನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.  ಕಳೆದೆರಡು ಪಂದ್ಯಗಳಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿದ್ದ ಬೆಂಗಳೂರು ಬುಲ್ಸ್ ಪಡೆ ಆರಂಭದಿಂದಲೇ ಆಕ್ರಮಣಕಾರಿಯಾಟದ ಮೊರೆ ಹೋಯಿತು.  ಪರಿಣಾಮ ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ತಂಡ 22-08 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಬಲಿಷ್ಠ ಜೈಪುರಗೆ ಆಘಾತ ನೀಡಿದ ತೆಲುಗು ಟೈಟಾನ್ಸ್

ಮೊದಲಾರ್ಧದಲ್ಲಿ ಬೃಹತ್ ಮುನ್ನಡೆ ಪಡೆದ ಬೆಂಗಳೂರು ದ್ವಿತಿಯಾರ್ಧದಲ್ಲಿ ಕೊಂಚ ರಕ್ಷಣಾತ್ಮಕ ಆಟದ ಮೊರೆಹೋಯಿತು. ಇದರ ಲಾಭ ಪಡೆಯಲು ಯತ್ನಿಸಿದ ಜೈಪುರ ನಿಧಾನವಾಗಿ ಅಂಕಗಳಿಸುತ್ತಾ ಸಾಗಿತು. ನಿತಿನ್ ರಾವಲ್ 8 ಅಂಕ ಪಡೆದರು. ಇದರ ಹೊರತಾಗಿಯೂ ದ್ವಿತಿಯಾರ್ಧದ 10 ನಿಮಿಷದ ಆಟದ ಬಳಿಕವು ಬೆಂಗಳೂರು ತಂಡ 34-16 ಅಂಕಗಳ ಅಂತರ ಕಾಯ್ದುಕೊಂಡಿತ್ತು. ನಾಯಕ ರೋಹಿತ್ ಕುಮಾರ್[13], ಪವನ್ ಶೆರಾವತ್[8], ಮಹೇಂದರ್ ಕುಮಾರ್[6] ಹಾಗೂ ಮೋಹಿತ್ ಕುಮಾರ್[5] ಅಮೂಲ್ಯ ಅಂಕ ಕಲೆ ಹಾಕುವುದರೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಅಂಕಿ-ಆಟ:
* ಪವನ್ ಶೆರಾವತ್ 2019ರ ಆವೃತ್ತಿಯಲ್ಲಿ ಯಶಸ್ವಿ 100 ರೇಡ್ ಪೂರೈಸಿದರು.
* ಬುಲ್ಸ್ ನಾಯಕ ರೋಹಿತ್ ಕುಮಾರ್ ಪ್ರೊ ಕಬಡ್ಡಿ ಇತಿಹಾಸದಲ್ಲಿ 1300ನೇ ರೇಡ್ ಪೂರೈಸಿದರು.
* ಜೈಪುರದ ಅಜಿಂಕ್ಯ ಪವಾರ್ ಪ್ರೊ ಕಬಡ್ಡಿ ಇತಿಹಾಸದಲ್ಲಿ 200 ರೇಡ್ ನಡೆಸಿದರು.
* ಪ್ರಸಕ್ತ ಆವೃತ್ತಿಯಲ್ಲಿ ರೋಹಿತ್ ಕುಮಾರ್ 50+ ರೇಡ್ ಪಾಯಿಂಟ್ ಕಲೆಹಾಕಿದರು.