PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!
ಪ್ರೋ ಕಬಡ್ಡಿ ಟೂರ್ನಿಯಲ್ಲಿ ದಬಾಂಗ್ ದಿಲ್ಲಿ ಗೆಲುವಿನ ಓಟ ಮುಂದುವರಿದಿದೆ. ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಪುಣೆ(ಸೆ.16): ಹರ್ಯಾಣ ಸ್ಟೀಲರ್ಸ್ ವಿರುದ್ಧದ ಸೋಲಿನ ಬಳಿಕ ಮಿಂಚಿನ ಪ್ರದರ್ಶನ ನೀಡುತ್ತಿರುವ ದಬಾಂಗ್ ದಿಲ್ಲಿ ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ತೆಲುಗು ಟೈಟಾನ್ಸ್ ವಿರುದ್ದ ನಡೆದ 94ನೇ ಪ್ರೋ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 37-29 ಅಂಕಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಆಡಿದ 16 ಪಂದ್ಯಗಳಲ್ಲಿ 13 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇಷ್ಟೇ ಅಲ್ಲ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತ ಪಡಿಸಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ!
ಸಿದ್ಧಾರ್ಥ್ ದೇಸಾಯಿ ರೈಡ್ ಪಾಯಿಂಟ್ ಮೂಲಕ ಶುಭಾರಂಭ ಮಾಡಿದ ತೆಲುಗು ಟೈಟಾನ್ಸ್ 10ನೇ ನಿಮಿಷದಲ್ಲಿ 9-7 ಅಂತರದ ಮುನ್ನಡೆ ಪಡೆದುಕೊಂಡಿತು. ಆದರೆ 14ನೇ ನಿಮಿಷದಲ್ಲಿ ತೆಲುಗು ತಂಡವನ್ನು ಆಲೌಟ್ ಮಾಡಿದ ದಬಾಂಗ್ ದಿಲ್ಲಿ 13-12 ಅಂಕಗಳ ಮುನ್ನಡೆ ಸಾಧಿಸಿತು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ಮೊದಲಾರ್ಧದ ಅಂತ್ಯದಲ್ಲಿ ದಿಲ್ಲಿ 18-15 ಅಂಕಗಳ ಅಂತರ ಕಾಯ್ದುಕೊಂಡಿತು.
ಇದನ್ನೂ ಓದಿ: ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್
ಸೆಕೆಂಡ್ ಹಾಫ್‌ನಲ್ಲಿ ತೆಲುಗು ದಿಟ್ಟ ಹೋರಾಟ ನೀಡಿತು. ಆದರೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. 10 ನಿಮಿಷದ ಆಟ ಮುಕ್ತಾಯಗೊಂಡಾಗ ದಬಾಂಗ್ ದಿಲ್ಲಿ 10 ಅಂಕಗಳ ಅಂತರ ಕಾಯ್ದುಕೊಂಡಿತ್ತು. ಹೀಗಾಗಿ ಪಂದ್ಯ ಮುಕ್ತಾಯದ ವೇಳೆಗೆ ದಬಾಂಗ್ ದಿಲ್ಲಿ ಸುಲಭವಾಗಿ 37-29 ಅಂಕಗಳ ಗೆಲುವು ಸಾಧಿಸಿತು.
ಜೈಪುರಕ್ಕೆ ಸೋಲುಣಿಸಿದ ಯುಪಿ ಯೋಧಾ:
ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯಕ್ಕೂ ಮೊದಲು ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಯುಪಿ ಯೋಧಾ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯುಪಿ 38-32 ಅಂಕಗಳಿಂದ ಜೈಪುರ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಯುಪಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಜೈಪುರ 7ನೇ ಸ್ಥಾನಕ್ಕೆ ಕುಸಿದಿದೆ.