PKL 2019; ಪಾಟ್ನಾ ಮಣಿಸಿದ ದಿಲ್ಲಿ, ಅಗ್ರಸ್ಥಾನದಲ್ಲಿ!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿರುವ ದಬಾಂಗ್ ದಿಲ್ಲಿ ಇದೀಗ ಪಾಟ್ನಾ ವಿರುದ್ಧವೂ ಗೆಲುವಿನ ನಗೆ ಬೀರಿದೆ. 108ನೇ ಲೀಗ್ ಪಂದ್ಯದಲ್ಲಿ ದಿಲ್ಲಿ ಹಾಗೂ ಪಾಟ್ನಾ ತಂಡದ ಹೋರಾಟದ ಹೈಲೈಟ್ಸ್ ಇಲ್ಲಿದೆ.
ಜೈಪುರ(ಸೆ.26): ಪ್ರೊ ಕಬಡ್ಡಿ 2019ರ ಟೂರ್ನಿಯಲ್ಲಿ ದಬಾಂಗ್ ದಿಲ್ಲಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಈ ಬಾರಿ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ದಿಲ್ಲಿ, ಇದೀಗ ಪಾಟ್ನಾ ಪೈರೇಟ್ಸ್ ವಿರುದ್ದವೂ ಗೆಲುವಿನ ನಗೆ ಬೀರಿದೆ. ಮೂಲಕ ಅಂಕಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಇದನ್ನೂ ಓದಿ: PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!
ಮಹತ್ವದ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ, ಪಾಟ್ನಾ ತಂಡವನ್ನು ಎದುರಿಸಿತು. ಟೂರ್ನಿಯುದ್ದಕ್ಕೂ ಅಗ್ರೆಸ್ಸಿವ್ ಆಟ ಆಡಿರುವ ದಬಾಂಗ್ ದಿಲ್ಲಿ, ಚಂದ್ರನ್ ರಂಜಿತ್ ಮೂಲಕ ಅಂಕ ಖಾತೆ ತೆರೆಯಿತು. ಪ್ರದೀಪ್ ನರ್ವಾಲ್ ಮಿಂಚಿನ ರೈಡ್ ಮೂಲಕ ಪಾಟ್ನಾ ದಿಟ್ಟ ತಿರುಗೇಟು ನೀಡಿತು. ಮೊದಲಾರ್ಧದ 10ನೇ ನಿಮಿಷದಲ್ಲಿ 7-7 ಅಂಕಗಳಿಂದ ಸಮಬಲಗೊಂಡಿತ್ತು.
ಉಭಯ ತಂಡಗಳು ಹೋರಾಟ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡಿತು. ಹೆಜ್ಜೆ ಹೆಜ್ಜೆಗೂ ಸ್ಕೋರ್ ಸಮಬಲಗೊಳ್ಳೋ ಮೂಲಕ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಾಯಿತು. ಮೊದಲಾರ್ಧದ ಅಂತ್ಯದಲ್ಲಿ 13-13 ಅಂಗಳಿಂದ ಸ್ಕೋರ್ ಸಮಬಲಗೊಂಡಿತು.
ದ್ವಿತಿಯಾರ್ಧ ಹೋರಾಟ ಕೂಡ ಅಷ್ಟೇ ರೋಚಕವಾಗಿತ್ತು. ಆದರೆ ಪಾಟ್ನಾ ದಿಢೀರ್ ಮುನ್ನಡೆ ಪಡೆದುಕೊಂಡಿತು. ಸೆಕೆಂಡ್ ಹಾಫ್‌ನ 10ನೇ ನಿಮಷದಲ್ಲಿ ಪಾಟ್ನಾ 27-24 ಅಂಕಗಳಿಂದ ಮುನ್ನಡೆ ಪಡೆಯಿತು. 15ನೇ ನಿಮಿಷದ ವರೆಗೆ ಹಿನ್ನಡೆಯಲ್ಲಿದ್ದ ಪಾಟ್ನಾ 16ನೇ ನಿಮಿಷದಲ್ಲಿ 36-36 ಅಂಕಗಳೊಂದಿಗೆ ಸಮಬಲ ಮಾಡಿಕೊಂಡಿತು. ಅಂತಿಮ ಹಂತದಲ್ಲಿ ಗೇರ್ ಬದಲಾಯಿಸಿದ ದಿಲ್ಲಿ 43-39 ಅಂಕಗಳೊಂದಿಗೆ ಗೆಲುವು ಸಾಧಿಸಿತು.