ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಿಶ್ವ ಚಾಂಪಿಯನ್ ನಿಖಾತ್..!
* ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖಾತ್ ಜರೀನ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ
* ವಿಶ್ವ ಚಾಂಪಿಯನ್‌ಶಿಪ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡ ಪ್ರಧಾನಿ
* ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ 5ನೇ ಮಹಿಳಾ ಬಾಕ್ಸರ್ ಎನ್ನುವ ಹಿರಿಮೆ ನಿಖಾತ್ ಪಾಲು
ನವದೆಹಲಿ(ಜೂ.02): ನೂತನ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖಾತ್ ಜರೀನ್ (Women's World Boxing Champion Nikhat Zareen), ಕಂಚಿನ ಪದಕ ವಿಜೇತರಾದ ಮನಿಶಾ ಮೌನ್ ಹಾಗೂ ಪ್ರವೀಣ್ ಹೂಡಾ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದರು. ಈ ವೇಳೆ ಅವರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು. ಇದೇ ವೇಳೆ ಬಾಕ್ಸರ್‌ಗಳು ಪ್ರಧಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
5ನೇ ಬಾಕ್ಸರ್: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ 5ನೇ ಮಹಿಳಾ ಬಾಕ್ಸರ್ ಎನ್ನುವ ಹಿರಿಮೆಗೆ ನಿಖಾತ್ ಪಾತ್ರರಾಗಿದ್ದರು. ದಿಗ್ಗಜ ಬಾಕ್ಸರ್ ಮೇರಿ ಕೋಮ್ 6 ಬಾರಿ ಚಾಂಪಿಯನ್(2002, 2005, 2006, 2008, 2010, 2018) ಆಗಿದ್ದರು. ಇನ್ನು ಸರಿತಾ ದೇವಿ(2005), ಜಿನ್ನಿ ಆರ್.ಎಲ್(2006), ಲೇಖಾ ಸಿ(2006) ಸಹ ಚಿನ್ನ ಜಯಿಸಿದ್ದರು.
ನಿಖಾತ್, ಈಶಾ ಸಿಂಗ್‌ಗೆ 2 ಕೋಟಿ ರುಪಾಯಿ: ತೆಲಂಗಾಣ
ಹೈದರಾಬಾದ್: ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಹಾಗೂ ಜೂನಿಯರ್ ಶೂಟಿಂಗ್ ವಿಶ್ವಕಪ್‌ನ ಚಿನ್ನ ವಿಜೇತ ಈಶಾ ಸಿಂಗ್ ಅವರಿಗೆ, ತೆಲಂಗಾಣ ಸರ್ಕಾರ ತಲಾ 2 ಕೋಟಿ ರು. ನಗದು, ಹೈದರಾಬಾದ್‌ನ ಜ್ಯುಬ್ಲಿ ಹಿಲ್ಸ್ ಅಥವಾ ಬಂಜಾರಾ ಹಿಲ್ಸ್‌ನಲ್ಲಿ ನಿವೇಶನವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಬುಧವಾರ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 25 ವರ್ಷದ ನಿಖಾತ್ ಇತ್ತೀಚೆಗೆ ವಿಶ್ವ ಬಾಕ್ಸಿಂಗ್‌ನ 52 ಕೆ.ಜಿ. ವಿಭಾಗದಲ್ಲಿ ಬಂಗಾರ ಗೆದ್ದಿದ್ದರು. ಇನ್ನು 17 ವರ್ಷದ ಈಶಾ ಜರ್ಮನಿಯಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ 3 ಚಿನ್ನ ಪದಕ ಜಯಿಸಿದ್ದರು.
ದಕ್ಷಿಣ ಏಷ್ಯಾ ಕುಸ್ತಿ: ರಾಜ್ಯದ ಉಮೇಶ್‌ಗೆ ಚಿನ್ನ
ದಾವಣಗೆರೆ: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉಮೇಶ್ ಜಮಾದಾರ್ ಚಿನ್ನದ ಪದಕ ಜಯಿಸಿದ್ದಾರೆ. 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಉಮೇಶ್ ಫೈನಲ್‌ನಲ್ಲಿ ಮಲೇಷ್ಯಾದ ಎದುರಾಳಿ ವಿರುದ್ಧ 10-0 ಅಂತರದಲ್ಲಿ ಗೆಲುವು ಸಾಧಿಸಿದರು. ಮೂಲತಃ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರ ಗ್ರಾಮದವರಾದ ಉಮೇಶ್, ಕಳೆದ ಕೆಲ ವರ್ಷಗಳಿಂದ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. ಫೈನಲ್‌ಗೂ ಮುನ್ನ ಉಮೇಶ್‌ಗೆ ಥಾಯ್ಲೆಂಡ್, ಇಂಡೋನೇಷ್ಯಾ, ಸಿಂಗಾಪುರ ಮತ್ತು ನೇಪಾಳದ ಕುಸ್ತಿಪಟುಗಳು ಎದುರಾಗಿದ್ದರು.
ಮೇರಿ ಕೋಮ್ ಭೇಟಿಯಾಗಿ ಆಶೀರ್ವಾದ ಪಡೆದ ನಿಖಾತ್
ಶೂಟಿಂಗ್ ವಿಶ್ವಕಪ್: ಭಾರತ ತಂಡಕ್ಕೆ ಚಿನ್ನ
ನವದೆಹಲಿ: ಸೋಮವಾರ ಅಜರ್‌ಬೈಜಾನ್‌ನ ಬಾಕುನಲ್ಲಿ ಆರಂಭಗೊಂಡ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ಮಹಿಳೆಯರ 10 ಮೀ. ರೈಫಲ್ ತಂಡ ವಿಭಾಗದಲ್ಲಿ ಇಳವೆನಿಲ್ ವಲರಿವನ್, ರಮಿತಾ ಮತ್ತು ಶ್ರೇಯಾ ಅಗರ್‌ವಾಲ್ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 17-5ರಲ್ಲಿ ಗೆದ್ದು ಚಿನ್ನದ ಪದಕ ಜಯಿಸಿತು. ಅರ್ಹತ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದಿದ್ದ ಈ ಜೋಡಿ, 2ನೇ ಸುತ್ತಿನಲ್ಲಿ 2ನೇ ಸ್ಥಾನ ಪಡೆದ ಫೈನಲ್‌ಗೇರಿತ್ತು. ಇನ್ನು ಪುರುಷರ ಏರ್ ರೈಫಲ್ ತಂಡ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಕಂಡಿತು.