ನವದೆಹಲಿ[ಅ.06]: ದೇಶದಲ್ಲಿ ಶನಿವಾರ[ಅಕ್ಟೋಬರ್ 05] ಮೊದಲ ಬಾರಿಗೆ ನಡೆದ NBA ಪಂದ್ಯಾವಳಿ, ಭಾರತ-ಅಮೆರಿಕಾ ನಡುವಿನ ಬಾಂಧವ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

’ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಭಾರತ-ಅಮೆರಿಕಾ ಸಂಬಂಧ ವೃದ್ದಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಮುಂಬೈ ಚೊಚ್ಚಲ NBA ಪಂದ್ಯಾವಳಿಗೆ ಆತಿಥ್ಯ ವಹಿಸಿತ್ತು. ಇಂಡಿಯನ್ ಪೇಸರ್ ಹಾಗೂ ಸ್ಯಾಕ್ರೋಮೆಂಟೋ ಕಿಂಗ್ಸ್ ನಡುವಿನ ಪಂದ್ಯ ಕ್ರೀಡಾಭಿಮಾನಿಗಳಿಗೆ ಅದ್ಭುತ ರಸದೌತಣ ನೀಡಿತು. ಕ್ರೀಡಾಭಿಮಾನಿಗಳನ್ನು ರಂಜಿಸಿದ ಉಭಯ ತಂಡಗಳಿಗೂ ಅಭಿನಂದನೆಗಳು’  ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಮುಂದುವರೆದು, ಬಾಸ್ಕೆಟ್‌ಬಾಲ್ ಯುವ ಜನತೆಯ ಜನಪ್ರಿಯ ಕ್ರೀಡೆ. NBA ಪಂದ್ಯಗಳಿಗೆ ಇದೀಗ ವೇದಿಕೆ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಯುವಕರು ಬಾಸ್ಕೆಟ್ ಬಾಲ್’ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಫಿಟ್ ಇಂಡಿಯಾ ಅಭಿಯಾನಕ್ಕೆ ನೆರವಾಗಲಿದ್ದಾರೆ ಎನ್ನುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಬಾಸ್ಕೆಟ್‌ಬಾಲ್‌: ಜಪಾನ್‌ ಚಾಂಪಿಯನ್‌

ಮುಂಬೈನ ಡೋಮ್’ನಲ್ಲಿರುವ SVP ಒಳಾಂಗಣ ಸ್ಟೇಡಿಯಂ ಭಾರತದ ಚೊಚ್ಚಲ NBA ಪಂದ್ಯಾವಳಿಗೆ ಸಾಕ್ಷಿಯಾಯಿತು. ಇಂಡಿಯನ್ ಪೇಸರ್ ತಂಡವು 132-131 ಅಂತರದಿಂದ ಸ್ಯಾಕ್ರೋಮೆಂಟೋ ಕಿಂಗ್ಸ್ ತಂಡವನ್ನು ರೋಚಕವಾಗಿ ಸೋಲಿಸಿತು. 

ಕಿಂಗ್ಸ್ ಮೊದಲ ಕ್ವಾರ್ಟರ್’ನಲ್ಲಿ 39-29 ಅಂಕಗಳ ಮುನ್ನಡೆ ಸಾಧಿಸಿತ್ತು. ಇದೇ ಮುನ್ನಡೆಯನ್ನು ದ್ವಿತೀಯ ಕ್ವಾರ್ಟರ್’ನಲ್ಲೂ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಪರಿಣಾಮ ದ್ವಿತೀಯ ಕ್ವಾರ್ಟರ್ ಮುಕ್ತಾಯದ ವೇಳೆಗೆ ಕಿಂಗ್ಸ್ 72 ಅಂಕಗಳಿಸಿದರೆ, ಪೇಸರ್ 59 ಅಂಕ ಕಲೆಹಾಕಿತ್ತು. ಇನ್ನು ಮೂರನೇ ಕ್ವಾರ್ಟರ್’ನಲ್ಲಿ ಪೇಸರ್ ಮೊದಲ ಬಾರಿಗೆ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತಾದರೂ ಕೊನೆಯಲ್ಲಿ ಮತ್ತೆ ಕಮ್’ಬ್ಯಾಕ್ ಮಾಡಿದ ಕಿಂಗ್ಸ್  97-92 ಅಂಕಗಳ ಮುನ್ನಡೆ ಗಳಿಸಿಕೊಂಡಿತು.

ಇನ್ನು ನಾಲ್ಕನೇ ಹಾಗೂ ನಿರ್ಣಾಯಕ ಕ್ವಾರ್ಟರ್’ನಲ್ಲಿ ಉಭಯ ತಂಡಗಳು 118-118 ಅಂಕಗಳನ್ನು ಗಳಿಸಿದವು. ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯದ ಮೊರೆ ಹೋಗಬೇಕಾಯಿತು. ಹೆಚ್ಚುವರಿ ಸಮಯದಲ್ಲಿ ಒಂದು ಅಂಕ ಮುನ್ನಡೆ ಸಾಧಿಸುವುದರೊಂದಿಗೆ ಇಂಡಿಯನ್ ಪೇಸರ್ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಯಿತು.

ರಿಲಯನ್ಸ್ ಫೌಂಡೇಶನ್ಸ್ ಮುಖ್ಯಸ್ಥೆ ನೀತಾ ಅಂಬಾನಿ ’ಮ್ಯಾಚ್ ಬಾಲ್’ ಅನ್ನು NBA ಅಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಕಿಂಗ್ಸ್-ಪೇಸರ್ ಪಂದ್ಯಾಟಕ್ಕೆ ಅಧಿಕೃತ ಚಾಲನೆ ನೀಡಿದರು. ಯೂಟ್ಯೂಬ್ ಸ್ಟಾರ್ ಭುವನ್ ಬಾಮ್ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದರು.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ...