ಬೆಂಗಳೂರು(ಸೆ.5): ಮಹಾರಾಷ್ಟ್ರದ ಎರಡು ತಂಡಗಳಾದ ಯು ಮುಂಬಾ-ಪುಣೇರಿ ಪಲ್ಟಾನ್ ನಡುವಿನ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಕೊನೆಯ ಕ್ಷಣದಲ್ಲಿ ಮಾಡಿಕೊಂಡ ಯಡವಟ್ಟಿನಿಂದಾಗಿ ಪುಣೇರಿ ಪಲ್ಟಾನ್ ಡ್ರಾಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾರಾಷ್ಟ್ರದ ಎರಡು ತಂಡಗಳ ಕಾದಾಟಕ್ಕೆ ಸಾಕ್ಷಿಯಾಯಿತು. ಮೊದಲಾರ್ಧದಲ್ಲಿ ಪ್ರೊ ಕಬಡ್ಡಿ ಎರಡನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ಮುನ್ನಡೆ ಗಳಿಸಿತ್ತು. ಮೊದಲಾರ್ಧದ 10ನೇ ನಿಮಿಷದಲ್ಲಿ ಪುಣೇರಿಯನ್ನು ಆಲೌಟ್ ಮಾಡಿದ ಯು ಮುಂಬಾ 11-5 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತು. ಇದೇ ಮುನ್ನಡೆ ಕಾಯ್ದುಕೊಂಡ ಮುಂಬಾ ಮೊದಲಾರ್ಧ ಮುಕ್ತಾಯದ ವೇಳೆಗೆ 16-12 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7: ಪ್ಲೇ-ಆಫ್‌ ಲೆಕ್ಕಾ​ಚಾರ- ಡೆಲ್ಲಿ ಬೆಸ್ಟ್‌, ಪ್ಲೇ-ಆಫ್‌ ರೇಸ್‌ನಲ್ಲಿ ಬುಲ್ಸ್‌!

ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಪುಣೇರಿ ಪಲ್ಟಾನ್ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡಿತು. ಪರಿಣಾಮ ದ್ವಿತಿಯಾರ್ಧದ ಆರನೇ ನಿಮಿಷದಲ್ಲಿ ಮುಂಬಾ ಆಲೌಟ್ ಮಾಡಿದ ಪುಣೇರಿ ತಂಡ 20-20 ಸಮಬಲ ಸಾಧಿಸುವಂತೆ ಮಾಡಿತು. ಇದರ ಬೆನ್ನಲ್ಲೇ ಸೂಪರ್ ರೇಡ್ ಮಾಡಿದ ಮಂಜೀತ್ ಮೂರು ಅಂಕ ಹೆಕ್ಕುವ ಮೂಲಕ ಪಲ್ಟಾನ್'ಗೆ 26-25 ಅಂಕಗಳ ಮುನ್ನಡೆ ಒದಗಿಸಿಕೊಟ್ಟರು. ಇದೇ ಆಟ ಮುಂದುವರೆಸಿದ ಪುಣೇರಿ ತಂಡ ಮತ್ತೊಮ್ಮೆ ಮುಂಬಾವನ್ನು ಆಲೌಟ್ ಮಾಡುವ ಮೂಲಕ ಅಂಕವನ್ನು 32-26ಕ್ಕೆ ಹಿಗ್ಗಿಸಿಕೊಂಡಿತು. ಆದರೆ ಕೊನೆಯಲ್ಲಿ ಅಭಿಷೇಕ್ ಸಿಂಗ್ ಮಿಂಚಿನ ದಾಳಿಗೆ ತಡಬಡಾಯಿಸಿದ ಪುಣೇರಿ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ಪುಣೇರಿ ಪರ ಮಜೀತ್ 10 ಹಾಗೂ ಪಂಕಜ್ ಮೋಹಿತೆ 5 ಅಂಕ ಪಡೆದರೆ, ಯು ಮುಂಬಾ ಪರ ಅಭಿಷೇಕ್ ಸಿಂಗ್ 11 ಹಾಗೂ ಅತುಲ್ ಮತ್ತು ಸಂದೀಪ್ ನರ್ವಾಲ್ 4 ಅಂಕ ಪಡೆದರು.