- ನವೀನ್ ಕೊಡಸೆ

ಪವನ್ ಕುಮಾರ್ ಶೆರಾವತ್ ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ರೇಡರ್. ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್’ನಲ್ಲಿ ಸಿಂಗಲ್ ಆರ್ಮಿ ರೀತಿ ಪ್ರದರ್ಶನ ತೋರಿದ್ದ ಪವನ್, ಬುಲ್ಸ್ ಪಡೆಯನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಬುಲ್ಸ್ ಅಭಿಮಾನಿಗಳ ಪಾಲಿನ ಕಣ್ಮಣಿಯಾಗಿರುವ ಪವನ್ ಶೆರಾವತ್ ಪ್ರಸಕ್ತ ಆವೃತ್ತಿಯಲ್ಲೂ 13 ಪಂದ್ಯಗಳನ್ನಾಡಿ 157 ರೇಡ್ ಪಾಯಿಂಟ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 

ಎರಡು ವರ್ಷಗಳ ಬಳಿಕ ಬೆಂಗಳೂರು ಬುಲ್ಸ್ ತಂಡ ತವರಿನಲ್ಲಿ ಕಬಡ್ಡಿಯಾಡುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಮಾತಿಗೆಳೆದಾಗ ಪವನ್ ಹೇಳಿದ್ದಿಷ್ಟು...

* ಈಗಾಗಲೇ ಅರ್ಧ ಲೀಗ್ ಪಂದ್ಯಗಳು ಮುಗಿದಿವೆ, ಪ್ಲೇ ಆಫ್ ಸ್ಥಾನಕ್ಕೇರಲು ನಿಮ್ಮ ರಣತಂತ್ರವೇನು..?

ನಮ್ಮ ತಂಡ ಏಳು-ಬೀಳುಗಳನ್ನು ನೋಡುತ್ತಾ ಸಾಗುತ್ತಿದೆ. ಇನ್ಮುಂದೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ಯಾಕೆಂದರೆ ಒಂದು ಪಂದ್ಯದ ಸೋಲು ಪ್ಲೇ ಆಫ್ ಕನಸನ್ನು ಭಗ್ನಗೊಳಿಸಬಹುದು. ಹೀಗಾಗಿ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಗಳನ್ನಾಡಲು ರೆಡಿಯಾಗಿದ್ದೇವೆ.

* ಮೂರನೇ ರೇಡರ್ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆಯೇ..?

ನಾನೂ ಲೀಡ್ ರೇಡರ್ ಆಗಿ ತಂಡಕ್ಕೆ ಅಂಕಗಳನ್ನು ತಂದುಕೊಡುತ್ತಿದ್ದೇನೆ. ರೋಹಿತ್ ಕೂಡಾ ಮತ್ತೊಂದು ತುದಿಯಲ್ಲಿ ಫಾರ್ಮ್’ಗೆ ಮರಳಿದರೆ ನಮಗೆ ಮೂರನೇ ರೇಡರ್ ಅನುಪಸ್ಥಿತಿ ಕಾಡುವುದಿಲ್ಲ. ವೈಯುಕ್ತಿಕವಾಗಿ ಹೇಳ್ಬೇಕು ಅಂದ್ರೆ ನಾನು ಹಾಗೂ ರೋಹಿತ್ ಒಳ್ಳೆಯ ಪ್ರದರ್ಶನ ನೀಡಿದರೆ, ಮೂರನೇ ರೇಡರ್ ಅವಶ್ಯಕತೆ ಕಾಡುವುದಿಲ್ಲ.   

* ಮೈದಾನದೊಳಗೆ ಹಾಗೂ ಮೈದಾನದಾಚೆ ರೋಹಿತ್ ಜತೆಗಿನ ಸಂಬಂಧ ಹೇಗಿದೆ..?

ತುಂಬಾ ಚೆನ್ನಾಗಿದೆ. ಕ್ರೀಡಾಂಗಣದಲ್ಲಂತೂ ನಾವಿಬ್ಬರು ಅಣ್ಣ-ತಮ್ಮಂದಿರಂತೆ ಇರುತ್ತೇವೆ. ಎದುರಾಳಿ ಡಿಫೆಂಡರ್ ಎದುರು ನಮ್ಮಿಬ್ಬರಲ್ಲಿ ಯಾರು ಚೆನ್ನಾಗಿ ಆಡುತ್ತೇವೆ ಎಂದು ಮೊದಲೇ ಮಾತನಾಡಿಕೊಳ್ಳುತ್ತೇವೆ. ರವೀಂಧರ್ ಪೆಹಲ್ ಎದುರು ರೋಹಿತ್ ಚೆನ್ನಾಗಿ ಆಡುತ್ತಾರೆ, ಆ ಸಂದರ್ಭದಲ್ಲಿ ರೋಹಿತ್ ಹೆಚ್ಚು ರೇಡಿಂಗ್ ಮಾಡಿ ಅಂಕ ಗಳಿಸಲು ಮುಂದಾಗುತ್ತಾರೆ. ಅಬುಜರ್ ಮಿಘಾನಿ ಇದ್ದಾಗ ನಾನು ರೇಡಿಂಗ್ ಮಾಡುತ್ತೇನೆ. ಮೈದಾನದಾಚೆಗೂ ತಮಾಷೆ-ಕಿತ್ತಾಟ ಮಾಡಿಕೊಂಡು ಇರುತ್ತೇವೆ.

* ಪಂದ್ಯದಲ್ಲಿ ಒತ್ತಡದ ಕ್ಷಣಗಳನ್ನು ಹೇಗೆ ನಿಭಾಯಿಸುತ್ತೀರಾ..?

ಎದುರಾಳಿ ತಂಡದ ಅಂಕ ಹೆಚ್ಚಿದ್ದಾಗಲೇ ನನಗೆ ಆಡಲು ಇನ್ನಷ್ಟು ಮಜಾ ಬರುತ್ತದೆ. ಕ್ರೀಡೆಯಲ್ಲಿ ಚಾಲೆಂಜಸ್ ಇರಬೇಕು, ಆಗ ಮಾತ್ರ ಮಜಾ ಇರುತ್ತೆ. ರೇಡಿಂಗ್’ನಲ್ಲಿ ಅಂಕ ಗಳಿಸುವ ಮೂಲಕ ನಮ್ಮ ತಂಡದ ಡಿಫೆಂಡರ್ಸ್ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. 

* 2 ವರ್ಷಗಳ ಬಳಿಕ ತವರಿನಲ್ಲಿ ಆಡುತ್ತಿರುವುದು ಹೇಗನಿಸುತ್ತಿದೆ..?

ತವರಿನಲ್ಲಿ ಆಡುತ್ತಿರುವುದಕ್ಕೆ ಖುಷಿ ಎನಿಸುತ್ತಿದೆ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಮೊದಲ ಪಂದ್ಯದಲ್ಲಿ ನಾವು ಸೋತರೂ ಜನರ ಪ್ರೀತಿ, ಪ್ರೋತ್ಸಾಹ ಕಿಂಚಿತ್ತು ಕಡಿಮೆಯಾಗಿಲ್ಲ. ಅಭಿಮಾನಿಗಳ ಈ ಮಟ್ಟಿಗಿನ ಬೆಂಬಲವೇ ನಮ್ಮನ್ನು ಇನ್ನಷ್ಟು ಹುರುಪಿನಿಂದ ಆಡಲು ಪ್ರೇರೇಪಿಸುತ್ತದೆ. 

* ಪ್ರೊ ಕಬಡ್ಡಿ ಆಡಲು ಕನಸು ಕಾಣುವ ಯುವಕರಿಗೆ ನಿಮ್ಮ ಸಂದೇಶ.?

ಗುರಿ ಮುಟ್ಟೋ ತನಕ ನಿಮ್ಮ ಕನಸನ್ನು ಕೈಚೆಲ್ಲಬೇಡಿ. ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಖಂಡಿತಾ ಒಂದಲ್ಲಾ ಒಂದು ಸಲ ಅವಕಾಶ ಸಿಗುತ್ತದೆ. ಒಂದು ಬಾರಿ ಪ್ರಯತ್ನಿಸಿ ಅವಕಾಶ ಸಿಕ್ಕಿಲ್ಲ ಎಂದು ಕೈಚೆಲ್ಲಿ ಕೂರಬೇಡಿ. ಅಭ್ಯಾಸ ಮಾಡುತ್ತಾ ಇರಿ. ನನ್ನನ್ನೇ ನೋಡಿ, ನನಗೆ ಮೂರು, ನಾಲ್ಕು ಹಾಗೂ ಐದನೇ ಆವೃತ್ತಿಯಲ್ಲಿ ಅಷ್ಟೊಂದು ಅವಕಾಶ ಸಿಗಲಿಲ್ಲ. ಆದರೆ ಆರನೇ ಆವೃತ್ತಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡೆ. ನಿಮ್ಮ ಗುರಿಯತ್ತ ಗಮನವಿರಲಿ. 

* ನಿಮಗೆ ಯಾವ ಡಿಫೆಂಡರ್ ಎದುರಿಸುವುದು ಕಷ್ಟ ಎನಿಸುತ್ತದೆ..?

ಹಾಗೆ ನಿರ್ದಿಷ್ಟವಾಗಿ ಒಬ್ಬರ ಹೆಸರನ್ನು ಹೇಳಲು ಬಯಸುವುದಿಲ್ಲ. ಎಲ್ಲಾ ತಂಡದಲ್ಲೂ ಒಳ್ಳೆಯ ಡಿಫೆಂಡರ್ ಇದ್ದಾರೆ. ಹಾಗಾಗಿ ಎಲ್ಲರನ್ನು ಎದುರಿಸುವುದು ಕಷ್ಟವೇ. ಆ ಕಷ್ಟದಲ್ಲೇ ಅಂಕ ಕಲೆಹಾಕುವುದು ಇಷ್ಟ...